ಬೆಂಗಳೂರು: ನಿರ್ಮಾಪಕ ತರುಣ್ ಶಿವಪ್ಪ ಸದಾ ಕ್ರಿಯಾಶೀಲತೆಗಾಗಿ ತುಡಿಯುವವರು. ತರುಣ್ ಟಾಕೀಸ್ ಸಂಸ್ಥೆಯನ್ನು ಆರಂಭಿಸಿ ಆ ಮೂಲಕ ರೋಸ್, ಮಾಸ್ ಲೀಡರ್, ವಿಕ್ಟರಿ-2 ಥರದ ಸೂಪರ್ ಹಿಟ್ ಚಿತ್ರಗಳನ್ನು ಸೇರಿದಂತೆ ಈಗ ನಿರ್ಮಾಣ ಹಂತದಲ್ಲಿರುವ ಖಾಕಿ ಸಿನಿಮಾವನ್ನು ನಿರ್ಮಿಸಿರುವವರು ನಿರ್ಮಾಪಕ ತರುಣ್ ಶಿವಪ್ಪ. ಸಾಮಾನ್ಯಕ್ಕೆ ಸಿನಿಮಾ ನಿರ್ಮಾಪಕರು ತಾವಾಯಿತು ತಮ್ಮ ಹಣಕಾಸಿನ ವ್ಯವಹಾರವಾಯಿತು ಎಂದು ಸುಮ್ಮನಾಗಿಬಿಡುತ್ತಾರೆ. ಯಾವ ಸಿನಿಮಾದ ಮೇಲೆ ಹೂಡಿಕೆ ಮಾಡಿದರೆ ಎಷ್ಟು ಲಾಭವಾಗಬಹುದು ಎಂಬುದಷ್ಟೇ ಅವರ ಲೆಕ್ಕಾಚಾರವಾಗಿರುತ್ತದೆ. ಆದರೆ ನಿರ್ಮಾಪಕ ತರುಣ್ ಶಿವಪ್ಪ ಅವರ ಆಲೋಚನಾ ಲಹರಿಯೇ ಬೇರೆ. ಕನ್ನಡ ಚಿತ್ರರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹೇಗೆ? ಇಲ್ಲಿ ಕೊರತೆ ಇರುವ ಸಮರ್ಥ ಕಲಾವಿದರು, ತಂತ್ರಜ್ಞರನ್ನು ಹುಟ್ಟುಹಾಕುವುದು ಹೇಗೆ ಎಂದು ಚಿಂತಿಸಿ, ಸಾಕಷ್ಟು ಜನರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅದು ಸಿನಿಮಾ ಶಾಲೆಯನ್ನು ಆರಂಭಿಸುವುದು.
`ಸಿನಿಮಾ ಸ್ಕೂಲ್’ ಹೆಸರಿನಲ್ಲಿ ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ತರಬೇತಿ ಕೇಂದ್ರವನ್ನು ನಿರ್ಮಾಪಕ ತರುಣ್ ಶಿವಪ್ಪ ಆರಂಭಿಸುತ್ತಿದ್ದಾರೆ. ಕಲಾದೇವಿಯನ್ನು ಆರಾಧಿಸುವ ಕಲಾರಾಧಕರಿಗೆ ಎನ್ನುವ ಅಡಿಬರಹವನ್ನೂ ನೀಡಿದ್ದಾರೆ.
Advertisement
Advertisement
ನಿಜ ಚಿತ್ರರಂಗದ ಭಾಗವಾಗಬೇಕು ಎಂದು ತುಡಿಯುವ ಅಸಂಖ್ಯ ಜನರಿದ್ದಾರೆ. ಆದರೆ ಸರಿಯಾದ ಮಾರ್ಗದರ್ಶನವಿಲ್ಲದೆ ಅನೇಕರು ತಮ್ಮ ಮನಸ್ಸಿಗೊಪ್ಪದ ಕ್ಷೇತ್ರಗಳಲ್ಲಿ ದುಡಿಯುವಂತಹ ಸಂದರ್ಭ ಒದಗಿಬರುತ್ತದೆ. ಇನ್ನು ಕೆಲವರು ಹೇಗೋ ಮಾಡಿ ಚಿತ್ರರಂಗದ ಸಂಪರ್ಕ ಸಾಧಿಸುತ್ತಾರಾದರೂ, ಪರಿಣತಿಯ ಕೊರತೆಯಿಂದ ಗೆಲುವು ಮರೀಚಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಕರಾರುವಕ್ಕಾದ, ಸ್ಪಷ್ಟ ಮಾರ್ಗದರ್ಶನ, ನಿಯಮಿತವಾದ ಶಿಕ್ಷಣ ಅಗತ್ಯ. ಆದರೆ, ಎಲ್ಲಿ ಹೋಗಿ ಯಾರ ಬಳಿ ಕಲಿಯುವುದು, ಅಸಲಿಗೆ ತಮಗೊಪ್ಪುವ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಎನ್ನುವ ಗೊಂದಲ ಇರುತ್ತದೆ. ಇಂಥ ಅಭ್ಯರ್ಥಿಗಳಿಗೆ `ಸಿನಿಮಾ ಸ್ಕೂಲ್’ ಸಂಪೂರ್ಣ ಸಹಕಾರಿಯಾಗಲಿದೆ. ನಟನೆ, ನಿರ್ದೇಶನ, ಛಾಯಾಗ್ರಹಣ, ಸಂಗೀತ, ಸಂಕಲನ ಮತ್ತು ನಿರೂಪಣೆಯ ಕುರಿತಾಗಿ ಇಲ್ಲಿ ತರಬೇತಿ ಆರಂಭಿಸಲಾಗುತ್ತಿದೆ.
Advertisement
ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ಸೇರಿದಂತೆ ರಾಜ್ಯದ ಹಲವಾರು ಸಿನಿಮಾ ಶಾಲೆಗಳಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ತರಬೇತುದಾರರಾಗಿ ಕಾರ್ಯ ನಿರ್ವಹಿಸಿರುವ, ಶಿವಾನಿ, ಮಿಂಚು, ಜುಲೈ22, 1947, ಇಂಗಳೆ ಮಾರ್ಗ, ಸಾವಿತ್ರಿ ಬಾಯಿ ಫುಲೆ, ಗೌರಿಪುತ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ವಿಶಾಲ್ ರಾಜ್ ಈ `ಸಿನಿಮಾ ಸ್ಕೂಲ್’ಗೆ ಪ್ರಾಂಶುಪಾಲರಾಗಿದ್ದಾರೆ. ಅನುಭವೀ ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಸಿನಿಮಾದಲ್ಲಿ ಹೆಸರು ಮಾಡಿದವರು, ರಂಗಕರ್ಮಿಗಳು `ಸಿನಿಮಾ ಸ್ಕೂಲ್’ ನಲ್ಲಿ ತರಬೇತಿ, ಉಪನ್ಯಾಸ ನೀಡಲಿದ್ದಾರೆ.
Advertisement
ನಾಗರಬಾವಿ ನಮ್ಮೂರ ತಿಂಡಿ ಹಿಂಭಾಗದಲ್ಲಿರುವ ಸೆವೆನ್ ವಂಡರ್ಸ್ ಕಟ್ಟಡದ ಎರಡನೇ ಮಹಡಿಯಲ್ಲಿ `ಸಿನಿಮಾ ಸ್ಕೂಲ್’ ಅಕ್ಟೋಬರ್ ತಿಂಗಳ ಕೊನೆಯ ವೇಳೆಗೆ ಕಾರ್ಯಾರಂಭ ಮಾಡಲಿದೆ. ಮೂರು ಮತ್ತು ಆರು ತಿಂಗಳ ಕೋರ್ಸ್ ಗಳು ಇಲ್ಲಿರುತ್ತವೆ. ಸಾಮಾನ್ಯವಾಗಿ ಸಿನಿಮಾ ಶಾಲೆಗಳು ನಿಗದಿತ ಅವಧಿಯಲ್ಲಿ ಕಲಿಸಿ ಸರ್ಟಿಫಿಕೇಟ್ ಕೊಟ್ಟು ಕಳಿಸಲಾಗುತ್ತದೆ. ಆದರೆ `ಸಿನಿಮಾ ಸ್ಕೂಲ್’ನ ಧ್ಯೇಯವೇ ಬೇರೆ ಇದೆ. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕಳಿಸಿಕೊಟ್ಟುಬಿಟ್ಟರೆ ಮತ್ತೆ ಅವರು ಆಡಿಷನ್‍ಗಳಲ್ಲಿ ಭಾಗವಹಿಸುತ್ತಾ, ಅವಕಾಶಕ್ಕಾಗಿ ಅಲೆದಾಡುವಂತಾಗುತ್ತದೆ. ಹೊಸದಾಗಿ ಕಲಿತು ಹೋದವರಿಗೆ ಅಷ್ಟು ಸುಲಭಕ್ಕೆ ಅವಕಾಶಗಳು ದೊರೆಯುವುದೂ ಇಲ್ಲ. ಸಿನಿಮಾ ಸ್ಕೂಲ್‍ನಲ್ಲಿ ಕೋರ್ಸು ಮುಗಿಸಿದ ಎರಡು ಮೂರು ಬ್ಯಾಚ್‍ಗಳ ಅಭ್ಯರ್ಥಿಗಳಲ್ಲಿ ಯಾರು ಉತ್ತಮವಾಗಿ ಕಲಿತಿರುತ್ತಾರೋ ಅವರಿಗಾಗಿಯೇ ತರುಣ್ ಟಾಕೀಸ್ ಅಡಿಯಲ್ಲಿ ಹೊಸ ಚಿತ್ರಗಳನ್ನು ಆರಂಭಿಸಿ, ಆದ್ಯತೆ ಮೇರೆಗೆ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ. ಕಮರ್ಷಿಯಲ್, ಕಲಾತ್ಮಕ ಮತ್ತು ಬ್ರಿಡ್ಜ್ ಚಿತ್ರಗಳನ್ನು ರೂಪಿಸಿ ಆ ಮೂಲಕ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗುತ್ತದೆ.
ಕಲಾದೇವಿಯನ್ನು ಆರಾಧಿಸುವ, ಚಿತ್ರರಂಗದಲ್ಲಿ ಕೆಲಸ ಮಾಡಲು ಬಯಕೆ ಇರುವವರು `ಸಿನಿಮಾ ಸ್ಕೂಲ್’ ಸೇರಿ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು.
ಸಂಪರ್ಕ: #40, 2ನೇ ಮಹಡಿ, ನಮ್ಮೂರ ತಿಂಡಿ ಬಳಿ, ಎನ್.ಜಿ.ಇ.ಎಫ್ ಲೇಔಟ್ ಪಾರ್ಕ್ ಎದುರು, ನಾಗರಬಾವಿ, ಬೆಂಗಳೂರು-560072, ಮೊಬೈಲ್ 92069 20689