ರಾಮನಗರ: ಲೋಕಾರ್ಪಣೆಗೊಂಡ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru – Mysuru Expressway) ಟೋಲ್ ದರ ಮತ್ತೆ ಏರಿಕೆಗೊಂಡಿದೆ. ಶನಿವಾರದಿಂದ ಪರಿಷ್ಕೃತ ದರ ಅನ್ವಯವಾಗಲಿದ್ದು ದಶಪಥ ಹೆದ್ದಾರಿ ಸಂಚಾರ ಮತ್ತಷ್ಟು ದುಬಾರಿ ಆಗಲಿದೆ.
ಕೇಂದ್ರ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ, ಹಳೆಯ ದರಕ್ಕಿಂತ ಶೇ.22ರಷ್ಟು ಟೋಲ್ ದರ ಏರಿಕೆಯಾಗಲಿದೆ. ಕಾರು, ವ್ಯಾನ್ ಹಾಗೂ ಜೀಪ್‍ಗೆ ಏಕಮುಖ ಸಂಚಾರ 165 ರೂ. ನಿಗದಿ (30ರೂ. ಹೆಚ್ಚಳ) ಮಾಡಲಾಗಿದೆ. ದ್ವಿಮುಖ ಸಂಚಾರಕ್ಕೆ 250 ರೂ. (45 ರೂ. ಹೆಚ್ಚಳ), ಲಘು ವಾಹನಗಳು ಹಾಗೂ ಮಿನಿ ಬಸ್‍ಗೆ 270 ರೂ. (50 ರೂ. ಹೆಚ್ಚಳ), ದ್ವಿಮುಖ ಸಂಚಾರ 405 ರೂ. (75 ರೂ. ಹೆಚ್ಚಳ), ಟ್ರಕ್, ಬಸ್ ಹಾಗೂ ಎರಡು ಆಕ್ಸೆಲ್ ವಾಹನ 565 ರೂ. (165 ರೂ. ಹೆಚ್ಚಳ), ದ್ವಿಮುಖ ಸಂಚಾರ 850 ರೂ. (160 ರೂ. ಹೆಚ್ಚಳ), ಮೂರು ಆಕ್ಸೆಲ್ ವಾಣಿಜ್ಯ ವಾಹನಗಳು ಏಕಮುಖ ಸಂಚಾರ 615 ರೂ. (115 ರೂ. ಹೆಚ್ಚಳ), ದ್ವಿಮುಖ ಸಂಚಾರ 925 ರೂ. (225 ರೂ. ಹೆಚ್ಚಳ), ಭಾರಿ ಕಟ್ಟಡ ನಿರ್ಮಾಣ ವಾಹಗನಳು, ಅರ್ಥ್ ಮೂವರ್ಸ್ 4-6 ಆಕ್ಸೆಲ್ ವಾಹನಗಳು 885 ರೂ. (165 ರೂ. ಹೆಚ್ಚಳ), ದ್ವಿಮುಖ ಸಂಚಾರ 1,330 ರೂ. (250 ರೂ. ಹೆಚ್ಚಳ), 7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು 1,080 ರೂ. (200 ರೂ. ಹೆಚ್ಚಳ), ದ್ವಿಮುಖ ಸಂಚಾರ 1,620 ರೂ. (305 ರೂ. ಹೆಚ್ಚಳ) ಮಾಡಲಾಗಿದೆ. ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಸಿಎಂ ಬೊಮ್ಮಾಯಿ ಕಾರ್ ತಡೆದ ಅಧಿಕಾರಿಗಳು!
ಈ ನೂತನ ದರಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ (BJP) ಸರ್ಕಾರ ಜನಸಾಮಾನ್ಯರ ಬಳಿ ಲೂಟಿ ಮಾಡುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರದ ಕೊಡುಗೆ. ದಶಪಥ ಹೆದ್ದಾರಿ ಬಡವರ ಉಪಯೋಗಕ್ಕಲ್ಲ, ಕೇವಲ ಹಣವಂತರು ಮಾತ್ರ ಉಪಯೋಗಿಸುವಂತಹ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಟೋಲ್ ಸಂಗ್ರಹ ಪ್ರಾರಂಭ ಆದಾಗಿನಿಂದಲೂ ದುಬಾರಿ ಶುಲ್ಕ ಎಂದು ಎಕ್ಸ್‌ಪ್ರೆಸ್‌ವೇ ಟೋಲ್ ಬಳಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಕಾಂಗ್ರೆಸ್ (Congress) , ಜೆಡಿಎಸ್ (JDS) ಸೇರಿ ಹಲವು ಕನ್ನಡ ಪರ ಸಂಘಟನೆಗಳು ಸಹ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಸರ್ವೀಸ್ ರಸ್ತೆ ಹಾಗೂ ಮೂಲಭೂತ ಸೌಕರ್ಯ ನೀಡಿಲ್ಲ ಎಂಬ ಆರೋಪ ಸಹ ಮಾಡಿದ್ದವು. ಇದೀಗ ಟೋಲ್ ಆರಂಭವಾದ 17 ದಿನಕ್ಕೆ ಮತ್ತೆ ದರ ಏರಿಕೆ ಮಾಡಿರುವುದಕ್ಕೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಪ್ರತಾಪ್ ಸಿಂಹ ಮನವಿ:
ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷ ಟೋಲ್ ದರ ಹೆಚ್ಚಿಳ ಮಾಡುವುದು ಸಾಮಾನ್ಯ ವಿಷಯ. ದೇಶದ ಎಲ್ಲಾ ಟೋಲ್ ದರಗಳಲ್ಲೂ ಹೆಚ್ಚಳ ಆಗಿದೆ. ಆದರೆ ಮೈಸೂರು-ಬೆಂಗಳೂರು ಹೆದ್ದಾರಿ ಮಾ.14 ರಂದು ಪ್ರಾರಂಭ ಆಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯ ಟೋಲ್ ದರ ಹೆಚ್ಚಳ ನಿರ್ಧಾರ ಪರಾಮರ್ಶೆ ಮಾಡಬೇಕು. ದರ ಯಥಾಸ್ಥಿತಿ ಮುಂದುವರೆಸುವಂತೆ ಮನವಿ ಮಾಡಿದ್ದೇನೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಶುಕ್ರವಾರ ಸಂಜೆ ಒಳಗಾಗಿ ಅಧಿಕಾರಿಗಳು ನಿರ್ಣಯ ತಿಳಿಸಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಇಬ್ಬರು ಸಿಎಂಗಳನ್ನ ಕೊಟ್ಟ ಹೆಗ್ಗಳಿಕೆ ಶಿಗ್ಗಾಂವಿ ಕ್ಷೇತ್ರದ್ದು