ಬೆಂಗಳೂರು: ಸದ್ಯ ಕರ್ನಾಟಕದ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರ ಪತ್ನಿ ಜಶೋದಾ ಬೆನ್ ಇಂದು ಬೆಂಗಳೂರಿನ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಜಶೋದಾ ಬೆನ್ ಅವರು, ಇಂದು ಬೆಳಗ್ಗೆ ರಾಜನುಕುಂಟೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ದೇವರ ದರ್ಶನ ಪಡೆದುಕೊಂಡರು.
ಬುಧವಾರ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠಕ್ಕೆ ತೆರಳುತ್ತಿದ್ದ ಜಶೋದಾ ಬೆನ್ ಅವರು ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಕೆಲಕಾಲ ವಿಶ್ರಾಂತಿ ಪಡೆದ್ದರು. ಜಶೋದಾ ಅವರು ನಿತ್ಯ ಬೆಳಿಗ್ಗೆ ಶಿವನ ದರ್ಶನ ಪಡೆಯದೇ ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಶಿವನ ದೇಗುಲ ಹುಡುಕಿಕೊಂಡು ಅವರು ನೀಲಕಂಠೇಶ್ವರಸ್ವಾಮಿ ದೇಗುಲಕ್ಕೆ ಬಂದಿದ್ದರು. ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸುಮಾರು 20 ನಿಮಿಷ ದೇಗುಲದಲ್ಲಿದ್ದರು.
ಪ್ರವಾಸಿ ಮಂದಿರದಲ್ಲಿ ಅವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರ ಸೇವನೆಗೂ ಮುನ್ನ ಅಶ್ವತ್ಥಾ ವೃಕ್ಷಕ್ಕೆ ಪೂಜೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದರು. ಆದರೆ ಅಶ್ವಥ ಮರದ ಕಟ್ಟೆ ಸಿಗದೇ ಅತ್ತಿ ಮರ ಸುತ್ತಿ ಭಕ್ತಿ ಸಮರ್ಪಿಸಿದ ಬಳಿಕ ಆಹಾರ ಸೇವನೆ ಮಾಡಿದ್ದರು. ನಂತರ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ್ದ ಜಶೋದಾ ಬೆನ್, ಸಂಜೆ ಆರು ಗಂಟೆ ವೇಳೆಗೆ ಶೃಂಗೇರಿ ಶಾರದಾಂಬೆ ಸನ್ನಿದಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ತುಂಗಾ ನದಿ ಹಾಗೂ ಸುತ್ತಮುತ್ತಲಿನ ಪರಿಸರ ಕಂಡು ಪುಳಕಿತರಾಗಿದ್ದರು.
ಬಳಿಕ ಶೃಂಗೇರಿ ಶಾರದಾಂಬೆ ದರ್ಶನ ಪಡೆದು, ಶಾರದಾಂಬೆ ಸನ್ನಿಧಿಯಲ್ಲಿ ಗರ್ಭಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ನಂತರ ಎರಡು ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲಿಂದ ಶ್ರೀಮಠಕ್ಕೆ ತೆರಳಿದ ಜಶೋದಾ ಬೆನ್, ಶೃಂಗೇರಿ ಮಠದ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬೆಂಗಳೂರುಗೆ ವಾಪಸ್ ಆಗಿದ್ದರು.