ಬೆಂಗಳೂರು: ಹುಳಿಮಾವು (Hulimavu) ಬಳಿ ಬಾಲಕನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು (Police) ಗುಂಡೇಟು ನೀಡಿದ್ದಾರೆ. ಗುಂಡೇಟು ತಿಂದ ಆರೋಪಿಗಳಲ್ಲಿ ಓರ್ವ, ಬಾಲಕನ ಮನೆಯಲ್ಲಿ ಹಿಂದೆ ಚಾಲಕನಾಗಿ ಕೆಲಸ ಮಾಡಿದ್ದ. ಇದೇ ಸಲುಗೆಯಿಂದ ಸುಲಭವಾಗಿ ಬಾಲಕನನ್ನು ಆರೋಪಿ ಅಪಹರಿಸಿದ್ದ.
ಪ್ರಕರಣದ ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ, ಇಬ್ಬರು ಸೇರಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಆನೇಕಲ್ | ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ
ಆರೋಪಿ ಗುರುಮೂರ್ತಿ ಈ ಹಿಂದೆ ನಿಶ್ಚಿತ್ ಮನೆಯಲ್ಲಿ ಡೈವರ್ ಆಗಿ ಕೆಲಸ ಮಾಡಿದ್ದ. ಇನ್ನೂ ಅಪಹರಣಕ್ಕೆ ಸಾಥ್ ನೀಡಿದ್ದ ಗೋಪಾಲ, ಕದ್ದಿದ್ದ ಮೊಬೈಲ್‌ನಿಂದ ನಿಶ್ವಿತ್ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಯುತ್ ಮತ್ತು ಕವಿತಾ ದಂಪತಿಯ ಪುತ್ರ ನಿಶ್ಚಿತ್ (13) ಬುಧವಾರ ಸಂಜೆ ಟ್ಯೂಷನ್‌ಗೆ ಹೋಗಿದ್ದಾಗ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಸಂಜೆ 7:30ಕ್ಕೆ ಟ್ಯೂಷನ್ ಮುಗಿಸಿಕೊಂಡು ಪ್ರತಿನಿತ್ಯ ಮನೆಗೆ ವಾಪಸ್ ಬರುತ್ತಿದ್ದ ಮಗ 8 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಟ್ಯೂಷನ್ ಶಿಕ್ಷಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ಟ್ಯೂಷನ್ ಮುಗಿಸಿಕೊಂಡು 7:30ಕ್ಕೆ ಹೋಗಿದ್ದಾಗಿ ಅವರು ಹೇಳಿದ್ದರು.
ಇದರಿಂದ ಗಾಬರಿಗೊಂಡ ಪೋಷಕರು ಮಗನ ಸ್ನೇಹಿತರು ಮತ್ತು ನೆಂಟರಿಗೆ ಕರೆ ಮಾಡಿ ವಿಚಾರಿಸಿದ್ದರು. ಯಾರ ಕಡೆಯಿಂದನೂ ನಿಶ್ಚಿತ್ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಆದರೆ ನಿಶ್ಚಿತ್ ಸೈಕಲ್ ಅರೆಕೆರೆ ಸಮೀಪದ ಫ್ಯಾಮಿಲಿ ಪಾರ್ಕ್ ಬಳಿ ಪತ್ತೆ ಆಗಿತ್ತು. ಇದರಿಂದ ಗಾಬರಿಗೊಂಡ ಪೋಷಕರು ಹುಳಿಮಾವು ಪೊಲೀಸರಿಗೆ ಮಗ ಕಾಣೆ ಆಗಿರುವ ಬಗ್ಗೆ ದೂರು ನೀಡಿದ್ದರು.
ಮರುದಿನ ನಿಶ್ಚಿತ್‌ನ ತಂದೆಗೆ ಆರೋಪಿಗಳು ಕರೆ ಮಾಡಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ನಿಶ್ಚಿತ್ ತಂದೆ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಟವರ್ ಲೊಕೇಷನ್ ಟ್ರ್ಯಾಕ್ ಮಾಡುವಷ್ಟರಲ್ಲಿ ಬಾಲಕನ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಬನ್ನೇರುಘಟ್ಟ (Bannerugatta) ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕುರಿಗಾಯಿಗಳು ಮೃತ ದೇಹವನ್ನು ನೋಡಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ತುಂಬಿದ ಬಸ್‌ಗಳಲ್ಲಿ ಕೈಚಳಕ ತೋರಿಸ್ತಿದ್ದ ಕಳ್ಳಿಯರ ಗ್ಯಾಂಗ್ ಲಾಕ್