ಫೇಸ್‍ಬುಕ್ ಗೆಳೆಯನನ್ನು ನೋಡಲು ಭೋಪಾಲ್‍ಗೆ ತೆರಳಿದ ಬೆಂಗ್ಳೂರಿನ ಅಪ್ರಾಪ್ತೆ

Public TV
3 Min Read
facebook

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ 10 ನೇ ತರಗತಿಯ ಹುಡುಗಿಯೊಬ್ಬಳು ತನ್ನ ಫೇಸ್‍ಬುಕ್ ಗೆಳೆಯನಿಗೆ ಸರ್ಪ್ರೈಸ್ ನೀಡಲು ವಿಮಾನದ ಮೂಲಕ ಭೋಪಾಲ್‍ಗೆ ತೆರಳಿರುವ ಪ್ರಸಂಗವೊಂದು ನಡೆದಿದೆ.

ಫೇಸ್‍ಬುಕ್ ಗೆಳೆಯನು ಕೂಡ ಅಪ್ರಾಪ್ತ. ಮನೆಯಲ್ಲಿ ತಂದೆಯ ಜೊತೆ ಹುಡುಗಿ ಜಗಳ ಮಾಡಿಕೊಂಡು ತನ್ನ ಫೇಸ್‍ಬುಕ್ ಗೆಳೆಯನ ನೋಡಲು ವಿಮಾನದಲ್ಲಿ ಭೋಪಾಲ್‍ಗೆ ಹೋಗಿದ್ದು, ಅಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಸದ್ಯ ಬೆಂಗಳೂರಿಗೆ ವಾಪಸ್ಸಾಗಿದ್ದಾಳೆ.

love complaint 1

ಹುಡುಗಿಯು ಶನಿವಾರ ಹುಡುಗನಿಗೆ ಹೇಳದೆ ಅವನ ಮನೆಯ ಹತ್ತಿರ ಹೋಗಿದ್ದಾಳೆ. ಹುಡುಗಿಯನ್ನು ಮನೆಯ ಹತ್ತಿರ ನೋಡಿದ ಹುಡುಗ, ಅಲ್ಲಿಂದ ಕರೆದುಕೊಂಡು ಹೋಗಿ ಹೋಟೆಲಿನಲ್ಲಿ ರೂಮ್ ಮಾಡಿದ್ದಾನೆ. ಆದರೆ ಅವಳ ಜೊತೆ ಇರುವ ಬದಲಾಗಿ ನೀನು ವಾಪಸ್ ಮನೆಗೆ ಹೋಗು ಎಂದು ಬುದ್ಧಿಮಾತು ಹೇಳಿದ್ದಾನೆ. ಇದರಿಂದ ಕೋಪಗೊಂಡ ಆಕೆ ಹೋಟೆಲಿನಲ್ಲಿ ಗಲಾಟೆ ಮಾಡಿದ್ದಾಳೆ.

ಹೀಗೆ ಹಬೀಬ್‍ಗಂಜ್‍ನ ಹೋಟೆಲಿನಲ್ಲಿ ಗಲಾಟೆ ಮಾಡುತ್ತಿದ್ದ ಹುಡುಗಿ ಸೋಮವಾರ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹುಡುಗಿಯನ್ನು ವಿಚಾರಿಸಿ ಆಕೆ ಇನ್ನೂ ಅಪ್ರಾಪ್ತೆ ಎಂದು ತಿಳಿದ ಪೊಲೀಸರು, ಅವಳನ್ನು ಠಾಣೆಗೆ ಕರೆದುಕೊಂಡು ಹೋಗದೆ ಮಕ್ಕಳ ಕಲ್ಯಾಣ ಸಮಿತಿಗೆ ಕರೆದುಕೊಂಡು ಹೋಗಿದ್ದಾರೆ.

police 1 1

ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಆಕೆಯನ್ನು ಕೌನ್ಸ್ ಲಿಂಗ್ ಮಾಡಿದ ಅಧಿಕಾರಿಗಳಿಗೆ ಹುಡುಗಿ, ತನ್ನ ಫೇಸ್‍ಬುಕ್ ಗೆಳೆಯನ ನಡತೆಯನ್ನು ಪರೀಕ್ಷೆ ಮಾಡಲು ನಾನು ಇಲ್ಲಿಗೆ ಬಂದಿದ್ದು ಎಂದು ಹೇಳಿದ್ದಾಳೆ. ಶನಿವಾರ ಹುಡುಗಿ ತನ್ನ ಗೆಳೆಯನ ಮನೆ ಹತ್ತಿರ ಹೋಗಿದ್ದಾಳೆ. ನಂತರ ಅವನು ತನ್ನ ಮನೆಯಲ್ಲಿ ನೀನು ಉಳಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿ ಹೋಟೆಲ್ ಬುಕ್ ಮಾಡಿದ್ದಾನೆ. ಆದರೆ ಅವಳ ಜೊತೆ ಉಳಿದುಕೊಳ್ಳದೆ ಸೋಮವಾರ ನೀನು ಮನಗೆ ವಾಪಸ್ ಹೋಗು ಎಂದು ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಇದರಿಂದ ಬೇಸರಗೊಂಡ ಆಕೆ ಹುಡುಗನ ಜೊತೆ ಜಗಳವಾಡಿ ಹೋಟೆಲ್ ಬಿಟ್ಟು ಹೊರಗೆ ಬಂದು ಪೊಲೀಸರ ಕೈಗೆ ಸಿಕ್ಕಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ರಾಜೀವ್ ಜೈನ್, ಹುಡುಗಿ ಫೇಸ್‍ಬುಕ್‍ನಲ್ಲಿ ತುಂಬಾ ಸ್ನೇಹಿತರನ್ನು ಹೊಂದಿದ್ದಾಳೆ. ಮನೆಯಲ್ಲಿ ತಂದೆಯ ಜೊತೆ ಜಗಳವಾಡಿಕೊಂಡು, ಕಾಲ್ ಸೆಂಟರ್‍ ನಲ್ಲಿ ಕೆಲಸ ಮಾಡಿ ಹಣ ಹೊಂದಿಸಿಕೊಂಡು ಅವಳ ಫೇಸ್‍ಬುಕ್ ಗೆಳೆಯನನ್ನು ಭೇಟಿಯಾಗಲು ಭೋಪಾಲ್‍ಗೆ ಬಂದಿದ್ದಾಳೆ. ಆದರೆ ತನ್ನ ಮಗಳು ಅವಳ ಚಿಕ್ಕಮ್ಮನ ಮನೆಗೆ ಹೋಗಿರಬಹುದು ಎಂದು ಆಕೆಯ ಪೋಷಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನಾವು ಆಕೆಗೆ ಮನೆಬಿಟ್ಟು ಬರುವುದು ತಪ್ಪು ಎಂದು ಮನವರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

facebook logo

ಆಕೆಯ ತಂದೆ ಬೆಂಗಳೂರಿನಲ್ಲಿ ದೊಡ್ಡ ಉದ್ಯಮಿಯಾಗಿದ್ದು, ಮಗಳು ಪಬ್‍ಗೆ ಹೋಗುವುದನ್ನು ನಿರಾಕರಿಸಿದ್ದಾರೆ. ಈ ಕಾರಣದಿಂದ ಮನೆಯಲ್ಲಿ ಜಗಳವಾಡಿಕೊಂಡು ಶುಕ್ರವಾರ ಭೋಪಾಲ್‍ಗೆ ವಿಮಾನ ಹತ್ತಿದ್ದಾಳೆ. ನಂತರ ಅಲ್ಲಿ ತನ್ನ ಇಬ್ಬರು ಫೇಸ್‍ಬುಕ್ ಗೆಳೆಯರ ಸಹಾಯ ಪಡೆದು ಶನಿವಾರ ಆಕೆಯ ಗೆಳೆಯನ ಮನೆ ಹತ್ತಿರ ಹೋಗಿದ್ದಾಳೆ. ನಾವು ಆಕೆಯ ತಂದೆಗೆ ಕರೆ ಮಾಡಿ, ಬಂದು ಮಗಳನ್ನು ಕರೆದುಕೊಂಡು ಹೋಗುವಂತೆ ಹೇಳಿದೆವು. ಅದರಂತೆ ಬಂದ ಅವರ ತಂದೆ, ಮಂಗಳವಾರ ರಾತ್ರಿ ಆಕೆಯನ್ನು ಕರೆದುಕೊಂಡು ಮನೆಗೆ ಹೋದರು ಎಂದು ಜೈನ್ ಹೇಳಿದ್ದಾರೆ.

ನಾನು ಆಕೆಯ ತಂದೆಗೆ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ಹೇಳಿದ್ದೇವೆ. ಮಕ್ಕಳ ಈ ಹಂತದಲ್ಲಿ ಪೋಷಕರು ಅವರ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಕ್ಕಳು ಪೋಷಕರಿಗೆ ಹೇಳದೆ ಈ ರೀತಿ ಹೊರಗೆ ಬರುವುದು ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ನಾವು ಹುಡುಗಿಗೆ ಹೇಳಿದ್ದೇವೆ. ಆಕೆ ನೋಡಲು ಬಂದ ಹುಡುಗ ಒಳ್ಳೆಯವನು. ಇಲ್ಲದಿದ್ದರೆ ಈ ವಿಚಾರ ತುಂಬಾ ಗಂಭೀರವಾಗರುತ್ತಿತ್ತು ಎಂದು ಜೈನ್ ತಿಳಿಸಿದ್ದಾರೆ.

Share This Article