ಬೆಂಗಳೂರು: ಮೆಟ್ರೋ ಸ್ಮಾರ್ಟ್ ಕಾರ್ಡ್ ಕಳೆದುಕೊಂಡು ಅದರಲ್ಲಿರುವ ಹಣ ರಿಫಂಡ್ ಮಾಡಿಕೊಡಿ ಎಂದು ದೂರು ಕೊಟ್ಟು ಕಳೆದ ನಾಲ್ಕು ದಿನಗಳಿಂದ ಮಹಿಳೆಯೊಬ್ಬರು ಬೈಯಪ್ಪನಹಳ್ಳಿ ಮೆಟ್ರೋ ಅಡ್ಮಿನ್ ಕಚೇರಿಗೆ ಅಲೆದಾಡಿ, ದುಂಬಾಲು ಬಿದ್ದರೂ ಮೆಟ್ರೋ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ತೋರಿಸಿದ ಘಟನೆ ನಡೆದಿದೆ.
ಪವಿತ್ರಾ ಎಂಬವರು ಕಳೆದ ನಾಲ್ಕು ದಿನದ ಹಿಂದೆ ಬೈಯಪ್ಪನಹಳ್ಳಿಯಿಂದ ಹೊಸಹಳ್ಳಿಗೆ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ತಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಕಳೆದುಕೊಂಡಿದ್ದಾರೆ. ಕಳೆದುಕೊಂಡಿರುವ ಮೆಟ್ರೋ ಕಾರ್ಡ್ ನಲ್ಲಿ 900 ರೂ.ಗೂ ಹೆಚ್ಚು ಹಣವಿತ್ತು. ಹೀಗಾಗಿ ಕಳೆದುಕೊಂಡಿರುವ ಕಾರ್ಡ್ ಗೆ ಮತ್ತೊಂದು ನಕಲಿ ಕಾರ್ಡ್ ಕೊಟ್ಟು, ಹಣ ರೀಫಂಡ್ ಮಾಡಿ ಅಂತ ಬೈಯಪ್ಪನ ಹಳ್ಳಿ ಮೆಟ್ರೋ ಅಧಿಕಾರಿಗಳಿಗೆ ಹಾಗೂ ಕೇಂದ್ರ ಕಚೇರಿಗೂ ಕೈಬರಹ ಹಾಗೂ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.
Advertisement
Advertisement
ಎರಡು ಬಾರಿ ದೂರು ಕೊಟ್ಟಾಗಲೂ ಅಧಿಕಾರಿಗಳು ಸ್ಪಂದಿಸಿಲ್ಲ. ಮೂರನೇ ಬಾರಿಗೆ ಸ್ಪಂದಿಸಿದ ಕೇಂದ್ರ ಕಚೇರಿಯ ಅಧಿಕಾರಿಗಳು , ಕಳೆದುಕೊಂಡ ಕಾರ್ಡ್ ನಲ್ಲಿರುವ ಹಣವನ್ನ ಹಿಂದಿರುಗಿಸಲು ಆಗೋದಿಲ್ಲ. ಅಂತಹ ಸೇವೆ ನಮ್ಮಲ್ಲಿ ಇಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಕೆರಳಿದ ಪವಿತ್ರಾ, ಪ್ರಯಾಣಿಕರ ಅನುಕೂಲಕ್ಕಾಗಿ ಎಂದು ಸ್ಮಾರ್ಟ್ ಕಾರ್ಡ್ ಜಾರಿಗೆ ತಂದಿದ್ದೀರಾ. ಅದೇ ಕಾರ್ಡ್ ನಿಂದ ಸಮಸ್ಯೆಯಾದಾಗ ಯಾಕೆ ಪರಿಹಾರ ನೀಡಲು ಆಗುವುದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಮುಖ್ಯವಾಗಿ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಕೊಂಡ ಬಳಿಕ ರಿಚಾರ್ಜ್ ಆದ ಹಣ ಬಿ.ಎಂ.ಆರ್.ಸಿ.ಎಲ್ ಹಣಕಾಸು ವಿಭಾಗಕ್ಕೆ ಹೋಗುತ್ತೆ. ಸೇವೆಯಲ್ಲಿರುವ ಕಾರ್ಡ್, ಕಳೆದುಕೊಂಡರೆ ಅದರಲ್ಲಿರುವ ಹಣವನ್ನು ಮರಳಿ ಕೊಡುವ ವ್ಯವಸ್ಥೆ ಬಿ.ಎಂ.ಆರ್.ಸಿ.ಎಲ್ ಮಾಡಿಕೊಂಡಿಲ್ಲ. ಗ್ರಾಹಕರೇ ಈ ವಿಷಯದಲ್ಲಿ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಮಹಿಳೆ ಪವಿತ್ರ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಬಿ.ಎಂ.ಆರ್.ಸಿ.ಎಲ್ ಗೆ ಹಣ ಮಾಡೋದಷ್ಟೆ ಮಾನದಂಡವಲ್ಲ. ಪ್ರಯಾಣಿಕರ ದೂರುಗಳಿಗೂ ಸ್ಪಂದಿಸಬೇಕು. ಒಂದು ಮಹಿಳೆಯ ದೂರು ಸ್ವೀಕರಿಸಲು ಇಷ್ಟೊಂದು ತಾತ್ಸರ ಮಾಡ್ತಾರೆ ಅಂತಾದರೆ, ಪ್ರಯಾಣಿಕರ ಬಗ್ಗೆ ಇವರಿಗೆಷ್ಟು ಕಾಳಜಿಯಿದೆ ಅನ್ನೋದು ಗೊತ್ತಾಗುತ್ತೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.