ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆ ನಾಳೆ ನಡೆಯುತ್ತಾ ಇಲ್ಲವೋ ಎನ್ನುವ ಗೊಂದಲದ ಮಧ್ಯೆ ನಾಳೆಯೇ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ನಿಗದಿಪಡಿಸಿದಂತೆ ಅಕ್ಟೋಬರ್ ಒಂದರಂದು ಮೇಯರ್-ಉಪಮೇಯರ್ ಹಾಗೂ ನಾಲ್ಕು ಸ್ಥಾಯಿಸಮಿತಿಗಳ ಚುನಾವಣೆ ನಡೆಯುತ್ತದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತ ತಿಳಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಪತ್ರದಲ್ಲಿ ತಿಳಿಸಿರುವಂತೆ, ಕೆಎಮ್‍ಸಿ ಕಾಯ್ದೆ 10(1), 11(2), (ಬಿ) ಹಾಗೂ ಉಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಕಾನೂನಿನ ಪ್ರಕಾರವೇ ನಾಳೆ ಚುನಾವಣೆ ನಡೆಯಲಿದೆ. ಚುನಾವಣೆ ಮುಂದೂಡುವ ಅಗತ್ಯವಿಲ್ಲ. ಮೇಯರ್ ಅವಧಿ ಸೆಪ್ಟೆಂಬರ್ 27ಕ್ಕೆ ಮುಗಿದಿರುವುದರಿಂದ ಚುನಾವಣೆ ನಡೆಸುವುದು ಚುನಾವಣಾಧಿಕಾರಿಯಾಗಿ ನನ್ನ ಕರ್ತವ್ಯ ಎಂದು ಹರ್ಷಗುಪ್ತ ತಿಳಿಸಿದರು.
Advertisement
Advertisement
ಒಟ್ಟಿನಲ್ಲಿ ಮೇಯರ್, ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಮಾರುಕಟ್ಟೆ, ಲೆಕ್ಕಪತ್ರ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ. ಬೆಳಗ್ಗೆ 8:30 ನಾಮಪತ್ರ ಸಲ್ಲಿಕೆಗೆ ನಡೆಯಲಿದ್ದು, 11:30 ಕ್ಕೆ ಚುನಾವಣೆ ನಡೆಯಲಿದೆ. ಆದರೆ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾದರೂ, ಮೇಯರ್ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಮೇಯರ್ ಆಯ್ಕೆ ಬಿಜೆಪಿ ಪಕ್ಷದೊಳಗೇ ಅಸಮಾಧಾನ ಉಂಟುಮಾಡಿದೆ.
Advertisement
ಇಂದು ಮಧ್ಯಾಹ್ನ ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ವಿಜಯ್‍ಕುಮಾರ್ ಅವರು ಪ್ರಾದೇಶಿಕ ಆಯುಕ್ತರಿಗೆ ಚುನಾವಣೆ ಮುಂದೂಡುವಂತೆ ಸೂಚಿಸಿದ್ದರು. ಬಿಬಿಎಂಪಿ ಮೇಯರ್/ ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸುವ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ. ಹೀಗಾಗಿ ಮೇಯರ್ ಉಪಮೇಯರ್ ಚುನಾವಣೆಯಂದ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಬೇಕೆಂದು ವಿಜಯ್ ಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದರು.
Advertisement
ಈ ಸಂಬಂಧ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿ, ಬಿಬಿಎಂಪಿ ಚುನಾವಣೆ ಮಾಡಲು ಸಿಎಂ ಆದೇಶ ಮಾಡಿದ್ದರು. ಆದರೆ ಸಮಿತಿಗಳ ಚುನಾವಣೆ ಕೂಡ ಮಾಡಬೇಕು ಎಂದು ನ್ಯಾಯಾಲಯದ ಆದೇಶ ಇದೆ. ಮತ್ತೊಂದು ಕಡೆ ಕೆಲವು ಸಮಿತಿ ಚುನಾವಣೆ ಬೇಡ ಎಂದು ಮತ್ತೊಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಚುನಾವಣೆ ಮುಂದೂಡಲಾಗಿದೆ ಎಂದು ತಿಳಿಸಿದ್ದರು. ಆದರೆ ಸಂಜೆಯ ವೇಳೆ ಚುನಾವಣೆ ನಡೆಸಲಾಗುವುದು ಎಂದು ಹರ್ಷಗುಪ್ತ ತಿಳಿಸಿದ್ದಾರೆ.