ಬೆಂಗಳೂರು: 71 ನೇ ಗಣರಾಜ್ಯೋತ್ಸವದ ಆಚರಣೆಗೆ ಮಾಣಿಕ್ ಷಾ ಪರೇಡ್ ಮೈದಾನ ಸಿದ್ಧವಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ವಿ.ಆರ್ ವಾಲಾ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಭಾರತೀಯ ವಾಯುಪಡೆಯಿಂದ ರಾಷ್ಟ್ರಧ್ವಜಕ್ಕೆ ಪುಷ್ಪನಮನ ಸಲ್ಲಿಸಲಾಗುತ್ತದೆ. ಬಳಿಕ ತೆರೆದ ವಾಹನದಲ್ಲಿ ರಾಜ್ಯಪಾಲರು ಪರೇಡ್ ವೀಕ್ಷಿಸಿ ಗೌರವ ರಕ್ಷೆ ಸ್ವೀಕಾರ ಮಾಡಲಿದ್ದಾರೆ.
Advertisement
ಈ ವರ್ಷದ ಗಣರಾಜ್ಯೋತ್ಸವದಲ್ಲಿ 44 ತುಕಡಿಗಳ 1750 ವಿದ್ಯಾರ್ಥಿಗಳಿಂದ ಕವಾಯತು ಮತ್ತು ಪಥ ಸಂಚಲನ ನಡೆಸಲಿದ್ದಾರೆ. ಮೊದಲ ಬಾರಿಗೆ ಬಿಬಿಎಂಪಿ ಪೌರ ಕಾರ್ಮಿಕರಿಂದ ಸ್ವಚ್ಛ ಭಾರತ್ ಅಭಿಯಾನದ ಜಾಗೃತಿ ಕುರಿತು ಪಥ ಸಂಚಲನ ನಡೆಸಲಿದ್ದಾರೆ. ಸುಮಾರು 2 ಸಾವಿರ ಮಕ್ಕಳಿಂದ 3 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇದಲ್ಲದೆ ಆಕರ್ಷಕ ಮೋಟಾರ್ ಸೈಕಲ್ ಪ್ರದರ್ಶನ, ರಾಜ್ಯ ಪೊಲೀಸ್ ಗರುಡ ಪಡೆಯಿಂದ ಅಣಕು ಪ್ರದರ್ಶನ ನಡೆಯಲಿದೆ. ಇದಾದ ಬಳಿಕ ರಾಜ್ಯಪಾಲರಿಂದ ಸರ್ವೋತ್ತಮ ಪ್ರಶಸ್ತಿ ಪ್ರದಾನವಾಗಲಿದೆ. ಕಾರ್ಯಕ್ರಮ ವೀಕ್ಷಣೆಗೆ 10 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಮೈದಾನದ ಸುತ್ತ 70 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
Advertisement
Advertisement
ಕಾರ್ಯಕ್ರಮ ನಡೆಯೋ ಮಾಣಿಕ್ ಷಾ ಮೈದಾನದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗಿದೆ. ಭದ್ರತೆಗಾಗಿ 10 ಕೆಎಸ್‍ಆರ್ ಪಿ ತುಕಡಿ, 2 ಡಿಸ್ವ್ಯಾಟ್ ತಂಡ, 1 ಕ್ಷಿಪ್ರ ಕಾರ್ಯಾಚರಣೆ ತಂಡ, ಗರುಡ ಪಡೆ, ಕಮಾಂಡ್ ಕಂಟ್ರೋಲ್ ವಾಹನ ನಿಯೋಜನೆ ಮಾಡಲಾಗಿದೆ. ಮೈದಾನದ ಸಂಪೂರ್ಣ ತಪಾಸಣೆಗೆ 7 AS ಚೆಕ್ ತಂಡ ನಿಯೋಜನೆ ಮಾಡಲಾಗಿದೆ. 9 ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಕಾರ್ಯ ನಡೆಯಲಿದೆ 150 ಅಧಿಕಾರಿಗಳು, 943 ಸಿಬ್ಬಂದಿ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಬೆಂಗಳೂರಲ್ಲಿ ಅನುಮಾನವಾಗಿ ವಾಸ್ತವ್ಯ ಹೂಡುವವರ ಮೇಲೆ ನಿಗಾವಹಿಸಲಾಗಿದೆ. ಹೊಟೇಲ್, ಲಾಡ್ಜ್ ಗಳು, ತಂಗುದಾಣಗಳಲ್ಲಿ ನಿಗಾ ಇಡಲಾಗಿದೆ ಅಂತ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅಲ್ಲದೆ ಮೈದಾನ ಸುತ್ತ 85 ಸಿಸಿ ಕ್ಯಾಮರಾ ಅಳವಡಿಕೆ ಮಾಡಿ ಹದ್ದಿನ ಕಣ್ಗಾವಲು ಇಡಲಾಗಿದೆ.
Advertisement
ಗಣರಾಜ್ಯೋತ್ಸವ ದಿನ ಮಾಣಿಕ್ ಷಾ ಮೈದಾನಕ್ಕೆ ಸಿಗರೇಟ್, ಬೆಂಕಿ ಪೆಟ್ಟಿಗೆ, ಕರಪತ್ರಗಳು, ಹರಿತವಾದ ವಸ್ತು, ಚಾಕು ಚೂರಿಗಳು, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮರಾ, ನೀರಿನ ಬಾಟಲ್, ಕ್ಯಾನ್, ಶಸ್ತ್ರಾಸ್ತ್ರಗಳು, ಮದ್ಯದ ಬಾಟಲ್, ತಿಂಡಿ-ತಿನಿಸು, ಬಾವುಟಗಳು, ಪಟಾಕಿ, ಸ್ಫೋಟಕ ವಸ್ತುಗಳು ಮೈದಾನದ ಒಳಗೆ ನಿಷೇಧ ಮಾಡಲಾಗಿದೆ.
ಗಣರಾಜ್ಯೋತ್ಸವ ದಿನದಂದು ವಾಹನ ಸಂಚಾರಕ್ಕೆ ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಆಗಮಿಸೋ ಗಣ್ಯರು, ಸಾರ್ವಜನಿಕರಿಗೆ 4 ಬಗೆಯ ಪಾಸ್ ನೀಡಲಾಗಿದೆ. ಅಲ್ಲದೆ ಎಲ್ಲರಿಗೂ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ನೀಡಲಾಗಿದೆ. ಭಾನುವಾರ ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಲೆ ಸರ್ಕಲ್ ನಿಂದ ಶಿವಾಜಿ ನಗರ ಬಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಓ ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ ವರೆಗೆ, ಎಂಜಿ ರೋಡ್, ಅನಿಲ್ ಕುಂಬ್ಳೆ ರಸ್ತೆಯಿಂದ ಕ್ವೀನ್ಸ್ ವೃತ್ತಿದ ವರೆಗೆ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.
ಭಾನುವಾರ ಬದಲಿ ರಸ್ತೆ ಮಾರ್ಗಗಳು:
* ಕಬ್ಬನ್ ಪಾರ್ಕ್, ಬಿವಿಆರ್ ಜಂಕ್ಷನ್ ಕಡೆಯಿಂದ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ಇನ್‍ಫೆಂಟ್ರಿ ರಸ್ತೆಗೆ ಬಂದು ಸಫೀನಾ ಪ್ಲಾಜಾದ ಬಳಿ ಎಡ ತಿರುವು ಪಡೆದು ಮೈನ್‍ಗಾರ್ಡ್ ರಸ್ತೆ ? ಆಲೀಸ್ ಸರ್ಕಲ್- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡೆಕನ್‍ಸನ್ ರಸ್ತೆ ಜಂಕ್ಷನ್‍ನಲ್ಲಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ ಜಂಕ್ಷನ ಬಳಿ ಎಡಕ್ಕೆ ತಿರುವು ಪಡೆದು ಮನಿಪಾಲ್ ಸೆಂಟರ್ ಗೆ ಹೋಗಬಹುದು.
* ಮಣಿಪಾಲ್ ಸೆಂಟರ್ ಕಡೆಯಿಂದ ಬಿಆರ್ ವಿ ಜಂಕ್ಷನ್ ಕಡೆ ಹೋಗುವ ವಾಹನಗಳು ಎಂ.ಜಿ.ರಸ್ತೆಗೆ ತೆರಳಿ ಅನಿಲ್‍ಕುಂಬ್ಳೆ ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುವ ಮೂಲಕ ಸಾಗಬಹುದು.
* ಭದ್ರತಾ ದೃಷ್ಟಿ ಹಿನ್ನೆಲೆ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮಾಣಿಕ್ ಷಾ ಮೈದಾನ ಸುತ್ತ ವಾಹನ ನಿಲುಗಡೆ ನಿಷೇಧಿಸಲಾಗಿದೆ.