ಬೆಂಗಳೂರು: ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ ಅಮಾನವೀಯ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಈ ಘಟನೆ ಕಳೆದ ಭಾನುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶೋಯೆಬ್ ಪಾಷಾ ಹಾಗೂ ನಬಿ ನಗರದ ಮಾವಳ್ಳಿ ಪ್ರದೇಶದ ಎಲ್‍ಬಿಎಫ್ ರಸ್ತೆಯಲ್ಲಿ ಕಿತ್ತಾಡಿಕೊಂಡಿದ್ದಾರೆ.
ಮಾತುಕತೆ ನಡೆಸಿದ ಬಳಿಕ ನಬಿ, ಶೋಯಬ್ ನನ್ನು ಹಗ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಶೋಯಬ್ ನಬಿಯನ್ನು ದೂರ ತಳ್ಳಿದ್ದಾನೆ. ಅಲ್ಲದೆ ನಿನ್ನ ಕೆಟ್ಟದಾಗಿ ಉಸಿರಾಡುತ್ತೀಯಾ ಎಂದು ತಿಳಿಸಿದ್ದಾನೆ. ಈ ವಿಚಾರ ಸಂಬಂಧ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಶೋಯಬ್ ಮಾತಿನಿಂದ ಕೆಂಡಾಮಂಡಲನಾದ ನಬಿ ಚಾಕು ತೆಗೆದುಕೊಂಡು ಬಂದು ಶೋಯಬ್ ಹೊಟ್ಟೆಗೆ ಇರಿದಿದ್ದಾನೆ. ಇಷ್ಟು ಮಾತ್ರವಲ್ಲದೆ, ರಕ್ತದ ಮಡುವಿನಲ್ಲಿ ಬಿದ್ದ ಶೋಯಬ್, ತನ್ನ ಸಹೋದರ ಶಾಹೀದ್ ಗೆ ಕರೆ ಮಾಡಿ ಸಹಾಯ ಮಾಡುವಂತೆ ಹೇಳಿದ್ದಾನೆ. ಹೀಗಾಗಿ ಸ್ಥಳಕ್ಕೆ ಬಂದ ಶಾಹೀದ್ ಮೇಲೂ ಚಾಕುವಿನಿಂದ ಇರಿದ ನಬಿ, ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಆಟೋಮೊಬೈಲ್ ಬಿಡಿ ಭಾಗಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಬಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದಾಗಿ ಗಾಯಗೊಂಡಿರುವ ಶೋಯಬ್ ಹಾಗೂ ಆತನ ಸಹೋದರ ಶಾಹೀದ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ನಬಿ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.