– ರೌಡಿಶೀಟರ್ ವಿಜಿ ಕೊಲೆಗೆ ಪ್ರತೀಕಾರದ ಶಂಕೆ
ಬೆಂಗಳೂರು: ಆಡುಗೋಡಿ ವಿಜಿ ಹತ್ಯೆ ಪ್ರಕರಣದ ಆರೋಪಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕರ್ನಾಟಕ ಗಡಿ ಭಾಗದ ತಮಿಳುನಾಡಿನ ಬಾಗಲೂರು ಬಳಿ ನಡೆದಿದೆ.
ಬಿಟಿಎಂ ಲೇಔಟ್‍ನ ನಿವಾಸಿ ಮಹೇಶ್ ಹತ್ಯೆಯಾದ ಆರೋಪಿ. ಮಹೇಶ್ ಇತ್ತೀಚಿಗಷ್ಟೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ. ಹಳೇ ದ್ವೇಷದಿಂದ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನ ಲಸ್ಕಂದ್ರ 16ನೇ ಅಡ್ಡರಸ್ತೆಯಲ್ಲಿ ರೌಡಿಶೀಟರ್ ವಿಜಯ್ ಅಲಿಯಾಸ್ ವಿಜಿಯನ್ನು ಡಿಸೆಂಬರ್ 2018ರಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗಳಾಗಿದ್ದ ಮಹೇಶ್ ಸೇರಿದಂತೆ ಐದು ಜನರನ್ನು ಬಂಧಿಸಲಾಗಿತ್ತು. 15 ದಿನಗಳ ಹಿಂದಷ್ಟೇ ಮಹೇಶ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ. ಈ ವಿಚಾರ ಕೊಲೆಯಾಗಿದ್ದ ವಿಜಿ ಸಹಚರರಿಗೆ ಗೊತ್ತಾಗಿತ್ತು. ಹೀಗಾಗಿ ಪ್ಲಾನ್ ರೂಪಿಸಿ, ಹತ್ಯೆ ಮಾಡಿದ್ದಾರೆ. ಬಳಿಕ ಶವವನ್ನು ತಮಿಳುನಾಡಿನ ಬಾಗಲೂರು ಬಳಿ ಎಸೆದಿದ್ದಾರೆ ಎಂದು ಕೇಳಿ ಬಂದಿದೆ.
ಈ ಕುರಿತು ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.