ಬೆಂಗಳೂರಲ್ಲಿ ಬೀದಿ ನಾಯಿಗಳ ದಾಳಿಗೆ ವೃದ್ಧ ಬಲಿ?

Public TV
1 Min Read
man died dogs attack

ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಸೀತಪ್ಪ (68) ಮೃತ ವ್ಯಕ್ತಿ. ನಸುಕಿನಜಾವ 3 ಗಂಟೆಗೆ ಬೀದಿನಾಯಿಗಳ ದಾಳಿಯಿಂದ ಮೃತಪಟ್ಟಿರಬಹುದೆಂದು ಅನುಮಾನಿಸಲಾಗಿದೆ.

ಚಹಾ ಸೇವಿಸಲು ಸ್ಥಳೀಯ ಚಹಾ ಅಂಗಡಿಗೆ ತೆರೆಳಿದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ವಿಚಾರಣೆ ವೇಳೆಯಲ್ಲಿ ಮಾಹಿತಿ ನೀಡಿದ್ದಾರೆ.

ಸದರಿ ಘಟನೆಯ ಬಗ್ಗೆ ಯಾವುದೇ ನಿಖರ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಮುಂಜಾನೆ ಜನ ಸಂಚಾರ ವಿರಳವಾಗಿದ್ದು, ಸಮಯಕ್ಕೆ ಸರಿಯಾಗಿ ಸಹಾಯ ದೊರೆಯದೆ ಇಲ್ಲದಿರುವುದು ಅವಘಡಕ್ಕೆ ಕಾರಣವಾಗಿರಬಹುದು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಸ್ವಲ್ಪ ಸಮಯದ ನಂತರ ಸಾರ್ವಜನಿಕರು ಸಹಾಯವಾಣಿ 112ಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಗಾಯಗೊಂಡಿದ್ದ ಸೀತಪ್ಪ ಅವರನ್ನು ಯಲಹಂಕ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಷ್ಟರಲ್ಲಾಗಲೇ ವೃದ್ಧ ಮೃತಪಟ್ಟಿದ್ದರು ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಬಿಬಿಎಂಪಿ ಪಶುಪಾಲನಾ ವಿಭಾಗದಿಂದ ಘಟನೆ ನಡೆದ ಸ್ಥಳದಲ್ಲಿರುವ 16 ಬೀದಿನಾಯಿಗಳನ್ನು ಹಿಡಿದು, ಯಲಹಂಕ ವಲಯದ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೇಂದ್ರ (ಎಬಿಸಿ ಸೆಂಟರ್)ದಲ್ಲಿ ಇರಿಸಲಾಗಿದೆ. ಇನ್ನುಳಿದ ನಾಯಿಗಳನ್ನು ಹಿಡಿಯಲಾಗುತ್ತಿದೆ.

ನಾಯಿಗಳ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದಾರೆಂದು ಮರಣೋತ್ತರ ಪರೀಕ್ಷಾ ವರದಿಯಿಂದ ದೃಢವಾದರೆ, ಪಾಲಿಕೆ ವತಿಯಿಂದ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

Share This Article