ಬೆಂಗಳೂರು: ಹಳೆ ಕಲ್ಲು ಹೊಸ ಬಿಲ್ಲು ಬಿಬಿಎಂಪಿಗೆ ಹೊಸದೇನಲ್ಲ. ಇದೀಗ ಬಿಬಿಎಂಪಿ ಹಗರಣ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದು ಮಾಜಿ ಉಪಮೇಯರ್ ವಾರ್ಡ್ ಸಂಬಂಧಿತವಾಗಿದ್ದು ಅನ್ನೋದು ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ನಾಗಪುರ ವಾರ್ಡ್ ನಲ್ಲಿ ಇರುವ ಉಷಾ ಪಾರ್ಕ್ ನಲ್ಲಿ ಜಿಮ್ ಉಪಕರಣಗಳ ಬದಲಾವಣೆಗೆ ಈಗ ಟೆಂಡರ್ ಕರೆಯಲಾಗಿದೆ. ವರ್ಷದ ಹಿಂದೆ ಹಾಕಿದ್ದ ಜಿಮ್ ಉಪಕರಣಗಳ ಬದಲಾವಣೆಗೆ ಟೆಂಡರ್ ಕರೆಯಲಾಗಿದೆ. ಆದರೆ ವರ್ಷದ ಹಿಂದೆ ಹಾಕಿರೋ ಉಪಕರಣಕ್ಕೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‍ಐಡಿಎಲ್) ದಿಂದ ಹಣ ಬಿಡುಗಡೆಯಾಗಿದೆ.
ಪಾರ್ಕ್ ನಲ್ಲಿ ಜಿಮ್ ಉಪಕರಣ ಹಾಕಲು ಸ್ಥಳಾವಕಾಶವಿಲ್ಲ. ಈಗಾಗಲೇ ಹತ್ತಕ್ಕೂ ಹೆಚ್ಚು ಜಿಮ್ ಉಪಕರಣಗಳು ಉತ್ತಮ ಸ್ಥಿತಿಯಲ್ಲಿದೆ. ಹೀಗಿರುವಾಗ ಜಿಮ್ ಸಲಕರಣೆ ಬದಲಾವಣೆಗೆ 25 ಲಕ್ಷ ಟೆಂಡರ್ ಕರೆಯಲಾಗಿದ್ದು, ಜೊತೆಗೆ ಉಷಾ ಪಾರ್ಕ್ ಇತರ ಅಭಿವೃದ್ಧಿಗಾಗಿ 20 ಲಕ್ಷ ಟೆಂಡರ್ ಮೊತ್ತ ಸಹ ಸೇರ್ಪಡೆ ಮಾಡಲಾಗಿದೆ. ಈ ಉಷಾ ಪಾರ್ಕ್ ಗಾಗಿ 45 ಲಕ್ಷ ಸುರಿಯಲು ಸಿದ್ಧವಾಗಿದೆ ಎನ್ನಲಾಗಿದೆ.
ಹೊಸ ಟೆಂಡರ್ ಅಗತ್ಯ ಈ ಪಾರ್ಕ್ ನಲ್ಲಿ ಕಾಣಿಸುತ್ತಿದೆಯಾ ಎಂದು ಈ ಹಗರಣ ಸಂಬಂಧ ದೂರು ನೀಡಲು ಮತ್ತೊಬ್ಬ ಮಾಜಿ ಉಪಮೇಯರ್ ಸಿದ್ಧವಾಗಿದ್ದಾರೆ. ಜೊತೆಗೆ 1 ಸಾವಿರ ಕೋಟಿ ಮಹಾಲಕ್ಷ್ಮೀ ಲೇಔಟ್ ಗೆ ಅನುದಾನ ಬಂದಿದೆ. ಈ ಎಲ್ಲ ಅನುದಾನದ ಬಗ್ಗೆ ತನಿಖೆಗೆ ಆಗ್ರಹಿಸಲು ಮಾಜಿ ಉಪಮೇಯರ್ ಹರೀಶ್ ಸಜ್ಜಾಗಿದ್ದಾರೆ.