ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಕುರಿತ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಸರ್ವ ರೀತಿಯಲ್ಲೂ ಅಲರ್ಟಾಗಿದೆ. ಈಗಾಗಲೇ ಮಹದಾಯಿ ನದಿ ಯೋಜನೆಗಳ ಜಾರಿಗೆ ರಾಜ್ಯ ಸರ್ಕಾರ ಪ್ರಕ್ರಿಯೆಗಳನ್ನು ಆರಂಭಿಸಿದೆ. ಈ ಬೆನ್ನಲ್ಲೇ ಸಾಧ್ಯವಾದಷ್ಟರ ಮಟ್ಟಿಗೆ ಮಹದಾಯಿ ಯೋಜನೆಯಿಂದಾಗುವ ರಾಜಕೀಯ ಲಾಭ ಪಡೆಯಲು ಸರ್ಕಾರ ಹೊರಟಿದೆ. ಆ ಮೂಲಕ ಮಹದಾಯಿ ಯೋಜನೆ ಜಾರಿಗೊಳಿಸಿದ ಸಂಪೂರ್ಣ ಕ್ರೆಡಿಟ್ ಪಡೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಬೃಹತ್ ರೈತ ಸಮಾವೇಶವೊಂದನ್ನು ಆಯೋಜಿಸಲು ಸರ್ಕಾರ ಪ್ರಾಥಮಿಕ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
Advertisement
ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ರೈತ ಸಮಾವೇಶ ನಡೆಸಲು ಸರ್ಕಾರ ಮುಂದಾಗಿದೆ. ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಬೃಹತ್ ರೈತ ಸಮಾವೇಶ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ವರ್ಷ ಕಿಸಾನ್ ಸಮ್ಮಾನ್ ಯೋಜನೆಯ ಎರಡನೇ ಹಂತದ ಜಾರಿಗೆ ತುಮಕೂರಿನಲ್ಲಿ ಆಯೋಜಿಸಿದ್ದ ಬೃಹತ್ ರೈತರ ಸಮಾವೇಶದ ಮಾದರಿಯಲ್ಲೇ ಮಹದಾಯಿ ಕುರಿತ ಸಮಾವೇಶವನ್ನೂ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಈ ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ರೈತರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲು ಯೋಜಿಸಲಾಗಿದೆ. ಬಜೆಟ್ ಅಧಿವೇಶನ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಇದಕ್ಕೂ ಮುನ್ನ ಕೇಂದ್ರದ ಬಿಜೆಪಿ ನಾಯಕರ ಗಮನಕ್ಕೆ ಮೊದಲು ಈ ವಿಚಾರ ತಂದು ಅನುಮತಿ ಪಡೆಯಲು ರಾಜ್ಯ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಮಹದಾಯಿ ಬೃಹತ್ ಸಮಾವೇಶಕ್ಕೆ ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್ ಶಾರನ್ನೇ ಕರೆಸಲು ರಾಜ್ಯ ಸರ್ಕಾರ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ. ಮಹದಾಯಿ ಯೋಜನೆ ಜಾರಿಗೊಳಿಸೇ ತೀರ್ತೀವಿ ಅಂತ ಸಿಎಂ ಬಿಎಸ್ ಯಡಿಯೂರಪ್ಪ ಪ್ರಮಾಣ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ ಮಹದಾಯಿ ಯೋಜನೆ ಜಾರಿಗೊಳಿಸಿ ರೈತರಿಗೆ ನೀರು ಒದಗಿಸುವುದಾಗಿ ಬಿಎಸ್ ವೈ ಭರವಸೆ ನೀಡಿದ್ದರು. ಇದೀಗ ಸುಪ್ರೀಂಕೋರ್ಟ್ ಆದೇಶ ನೀಡಿದ ಒಂದು ವಾರದಲ್ಲಿ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ರೈತರ ಸಂಕಷ್ಟ ಆಲಿಸಿದೆ ಅಂತ ಬಿಂಬಿಸಲು ಬೃಹತ್ ಸಮಾವೇಶಕ್ಕೆ ರೂಪುರೇಷೆ ಹಾಕಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.