ಬೆಂಗಳೂರು: ವಿಪಕ್ಷ ನಾಯಕನ ಸ್ಥಾನದ ಜೊತೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಎರಡೂ ನನ್ನೊಬ್ಬನಿಗೇ ಸಿಗಬೇಕು ಎಂಬ ಸ್ವಾರ್ಥ ಮೆರೆಯಲು ಮುಂದಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ವೀಕ್ಷಕ ಮಧುಸೂದನ್ ಮಿಸ್ತ್ರಿ ಮುಂದೆ ಮುಜುಗರಕ್ಕೀಡಾಗಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಎಐಸಿಸಿ ವೀಕ್ಷಕ ಮಧುಸೂದನ್ ಮಿಸ್ತ್ರಿ ಜೊತೆಗಿನ ಭಾನುವಾರದ ಸಭೆಯಲ್ಲಿ ಮಿಸ್ತ್ರಿ ಅವರು ಸಿದ್ದರಾಮಯ್ಯರ ಬಳಿ ವಿಪಕ್ಷ ನಾಯಕನ ಸ್ಥಾನಕ್ಕೆ, ಸಿಎಲ್‍ಪಿಗೆ ನಿಮ್ಮ ಪ್ರಕಾರ ಯಾರು ಸೂಕ್ತ, ಹಾಗೆಯೇ ಕೆಪಿಸಿಸಿಗೆ ಯಾರು ಸೂಕ್ತ ಅಭ್ಯರ್ಥಿ ಎಂದು ಕೇಳಿದ್ದಾರೆ. ಈ ವೇಳೆ ಸಿದ್ದರಾಮಯ್ಯ 65 ಶಾಸಕರಲ್ಲಿ 35 ಶಾಸಕರು 12 ವಿಧಾನ ಪರಿಷತ್ ಸದಸ್ಯರು ಸಹಿ ಹಾಕಿದ್ದಾರೆ ಎಂದು ಪಟ್ಟಿ ಕೊಡಲು ಮುಂದಾಗಿದ್ದಾರೆ. ಈ ವೇಳೆ ಮಿಸ್ತ್ರಿ, ಶಾಸಕರ ಸಹಿ ಅಥವಾ ಪಟ್ಟಿ ಬೇಡ. ಕೇವಲ ನಿಮ್ಮ ಅಭಿಪ್ರಾಯಮವನ್ನಷ್ಟೇ ಹೇಳಿ ಎಂದಿದ್ದಾರೆ.
ಆಗ ಮಾತನಾಡಿದ ಸಿದ್ದರಾಮಯ್ಯ, ಸಿಎಲ್‍ಪಿ ನಾಯಕ ಹಾಗೂ ವಿಪಕ್ಷ ನಾಯಕ ಎಂದು ಪ್ರತ್ಯೇಕ ಸ್ಥಾನಮಾನ ಬೇಡ ಎರಡೂ ಒಬ್ಬರೇ ಆದರೆ ಉತ್ತಮ. ನಾನು ಆ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಅಲ್ಲದೆ ಈಗಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನೇ ಮುಂದುವರಿಸುವುದು ಸೂಕ್ತ ಎಂದಿದ್ದಾರೆ. ಆದರೆ ಇದಕೊಪ್ಪದ ಮಿಸ್ತ್ರಿ, ಸಿಎಲ್‍ಪಿ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಒಬ್ಬರನ್ನೇ ತರಲು ಸಾಧ್ಯವಿಲ್ಲ. ಈಗಾಗಲೇ ದೆಹಲಿ, ಹರಿಯಾಣ ಹಾಗೂ ಮಹರಾಷ್ಟ್ರದಲ್ಲಿ ಈ ಪ್ರಯೋಗ ಮಾಡಿದ್ದೇವೆ. ವಿಪಕ್ಷ ನಾಯಕ ಹಾಗೂ ಸಿಎಲ್‍ಪಿ ನಾಯಕ ಬೇರೆ ಬೇರೆಯೇ ಆಗಬೇಕು ಎಂದಿದ್ದಾರೆ.
ಎರಡರಲ್ಲಿ ಒಂದು ಸ್ಥಾನ ತಮ್ನ ಕೈತಪ್ಪುತ್ತದೆ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಾರ್ಥವನ್ನು ಮೆರೆದಿದ್ದಾರೆ. ಸ್ವಾರ್ಥಕ್ಕಾಗಿ ತಮ್ಮ ಬೆಂಬಲಿಗ ದಿನೇಶ್ ಗುಂಡುರಾವ್ ಅವರನ್ನೇ ಬಲಿ ಹಾಕಲು ಮುಂದಾಗಿದ್ದಾರೆ. ಬೇರೆ ರಾಜ್ಯದ ವಿಷಯ ಬೇರೆ, ಕರ್ನಾಟಕದ ವಿಷಯ ಬೇರೆ ವಿಪಕ್ಷ ನಾಯಕ ಹಾಗೂ ಸಿಎಲ್‍ಪಿ ಒಬ್ಬರ ಬಳಿ ಇದ್ದರೆ ಅನುಕೂಲ. ಬೇಕಾದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರನ್ನ ಬದಲಿಸಿ. ಅವರ ಸ್ಥಾನಕ್ಕೆ ಬೇರೆ ಪ್ರಭಾವಿ ವ್ಯಕ್ತಿಯನ್ನ ನೇಮಿಸಿ ಎಂದಿದ್ದಾರೆ.
ಸಿದ್ದರಾಮಯ್ಯರೆ ಸಿಎಲ್ ಪಿ ಹಾಗೂ ವಿಪಕ್ಷ ನಾಯಕರಾಗಲಿ ಅಂತ ಶಾಸಕರ ಸಹಿ ಸಂಗ್ರಹಿಸಲು ಸ್ವತಃ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೆರೆಮರೆಯಲ್ಲಿ ಕೆಲಸ ಮಾಡಿದ್ದರು. ಆದರೆ ತಾವೇ ನಂಬಿದ್ದ ತಮ್ಮ ನಾಯಕನ ಸ್ಥಾನ ಭದ್ರ ಮಾಡುವ ಜೊತೆಗೆ ತಮ್ಮ ಸ್ಥಾನವನ್ನೂ ಭದ್ರ ಮಾಡಿಕೊಳ್ಳಲು ದಿನೇಶ್ ಗುಂಡೂರಾವ್ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ಸ್ವತಃ ತಾವೇ ನಂಬಿದ್ದ ಸಿದ್ದರಾಮಯ್ಯ ಅವರೇ ತಮ್ಮನ್ನು ಹರಕೆಯ ಕುರಿ ಮಾಡಿದ್ದಾರೆ ಅಂತ ತಿಳಿದು ದಿನೇಶ್ ಗುಂಂಡೂರಾವ್ ಅಚ್ಚರಿಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.