ಬೆಂಗಳೂರು: ತೋಟಗಾರಿಕೆ ಇಲಾಖೆಯು ಇಂದಿನಿಂದ ಮೂರು ದಿನಗಳ ಕಾಲ ಲಾಲ್‍ಬಾಗ್‍ನಲ್ಲಿ ರಾಜ್ಯ ಮಟ್ಟದ ಮಧು ಮಹೋತ್ಸವ ಮತ್ತು ಜೇನು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಈ ಜೇನು ಮೇಳಕ್ಕೆ ಇಂದು ಬೆಳಗ್ಗೆ ತೋಟಗಾರಿಕೆ ಸಚಿವ ವಿ. ಸೋಮಣ್ಣ ಹಾಗೂ ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಚಾಲನೆ ನೀಡಿದ್ರು.
ಜೇನು ಮೇಳದಲ್ಲಿ ಜೇನು ಸಾಕಲು ಆಸಕ್ತಿ ಇರುವವರಿಗೆ ತರಬೇತಿ ನೀಡುವುದರ ಜೊತೆಗೆ ಜೇನು ಪ್ರಿಯರಿಗೆ ಉತ್ತಮ ಗುಣಮಟ್ಟದ ಜೇನುತುಪ್ಪ ಹಾಗೂ ಜೇನು ತುಪ್ಪದಿಂದ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಜೇನಿನಿಂದ ತಯಾರಿಸಿರುವ ಸೌಂದರ್ಯ ವರ್ಧಕಗಳು ಮತ್ತಿತರ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ.
ವಿಶೇಷವಾಗಿ ಇಲ್ಲಿ ಲೈವ್ ಜೇನಿನ ಪ್ರಾತ್ಯಕ್ಷಿಕೆ ಸಹ ಇಡಲಾಗಿದೆ. ತುಡುವೆ ಜೇನು ಹಾಗೂ ವಿದೇಶಿ ಜೇನಿನ ಸಾಕಾಣಿಕೆಯನ್ನು ಲಾಲ್ ಬಾಗ್ ನಲ್ಲಿ ಇಡಲಾಗಿದೆ. ಜೊತೆಗೆ ಕೃಷಿಕರಿಂದ ನೇರವಾಗಿ ಜೇನು ಹಾಗೂ ಜೇನಿನಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವುದರ ಜೊತೆಗೆ ಜೇನು ಸಾಕಾಣೆ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ.
ರಾಜ್ಯದಲ್ಲಿ ಇಲ್ಲಿಯವರಗೆ 4 ಕೋಟಿ ರೂಪಾಯಿ ಬೆಲೆ ಬಾಳುವ ಜೇನು ಪೆಟ್ಟಿಗೆ ವಿತರಣೆ ಮಾಡಲಾಗಿದೆ. ಪ್ರತಿ ಜೇನು ಪೆಟ್ಟಿಗೆಗೆ 4.7 ಸಾವಿರ ರೂಪಾಯಿ ಬೆಲೆಯಿದ್ದು, ಸಾಮಾನ್ಯ ವರ್ಗದವರಿಗೆ ಶೇ.76, ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ ಶೇ. 90 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಮಧುವನ ನಿರ್ಮಾಣಕ್ಕಾಗಿ 1.5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ತರಬೇತಿ ನೀಡುವುದಕ್ಕಾಗಿ 50 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ರಾಜ್ಯ ತೋಟಗಾರಿಕಾ ಅಪಾರ ನಿರ್ದೇಶಕ ಪ್ರಕಾಶ್ ಸೊಬರದ ಮಾಹಿತಿ ನೀಡಿದ್ರು.