– ಸುದ್ದಿಗೋಷ್ಠಿಗೆ ದರ್ಶನ್, ಯಶ್ ಸಾಥ್
– ಅಂಬಿ ಕನಸನ್ನು ನನಸು ಮಾಡಲು ಅವಕಾಶ ನೀಡಿ
ಬೆಂಗಳೂರು: ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಮಂಡ್ಯ ಕ್ಷೇತ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದು, ಇತ್ತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಶ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜನ ಅಂಬರೀಶ್ ಮೇಲಿಟ್ಟಿದ್ದ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಲು ಅವರ ಒತ್ತಾಯದಂತೆ ಸೇವೆ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
Advertisement
ಅಂಬರೀಶ್ ನೆನೆದು ಭಾವುಕರಾಗಿಯೇ ಮಾತು ಆರಂಭಿಸಿದ ಸುಮಲತಾ, ಜೀವನದಲ್ಲಿ ಕೆಲವು ಕ್ಷಣವನ್ನು ನಾವು ಹುಡುಕಿಕೊಂಡು ಹೋಗಿ ಏನೇನು ಮಾಡಬೇಕೆನ್ನುವ ನಿರ್ಧಾರ ಮಾಡುತ್ತೇವೆ. ಆದರೆ ಒಂದೊಂದು ಸಲ ಆ ಕ್ಷಣಗಳೇ ನಮ್ಮನ್ನು ಹುಡುಕಿಕೊಂಡು ಬಂದು ಅದೇ ನಿರ್ಧಾರ ಮಾಡುತ್ತದೆ. ಈಗ ಆ ಸಮಯ ಬಂದಿದೆ ಎಂದು ಹೇಳಿದ್ರು.
Advertisement
Advertisement
ಅಂಬರೀಶ್ ಸಾವಿನಿಂದ ನೊಂದಿದ್ದೆ. ಆ ಸಂದರ್ಭದಲ್ಲಿ ಸ್ನೇಹಿತರು ಕುಟುಂಬಸ್ಥರು ಎಲ್ಲರೂ ನನ್ನ ಜೊತೆ ಇದ್ದರು. ಆದರೂ ಮನಸ್ಸಿಗೆ ಸಮಾಧಾನ ಇರುತ್ತಿರಲಿಲ್ಲ. ಈ ಒಂದು ಮನಸ್ಥಿತಿಯಿಂದ ಹೊರಗೆ ಬರುತ್ತೀನೋ ಇಲ್ಲವೋ ಎಂಬ ಪರಿಸ್ಥಿತಿಯಲ್ಲಿದ್ದೆ. ಅಂಬರೀಶ್ ಬದುಕಿದ್ದಾಗ ಅವರ ಜೊತೆ 24 ಗಂಟೆಯೂ ಸ್ನೇಹಿತರಿದ್ದರು. ಯಾವತ್ತೂ ಅವರು ನಾನು, ನನ್ನ ಕುಟುಂಬ, ನನ್ನ ಮನೆ ಎಂದು ಯೋಚನೆ ಮಾಡಿದವರಲ್ಲ. ಆದರೆ ಅವರು ಹೋದ ಬಳಿಕ ಒಂದಷ್ಟು ಜನ ಕಾಣಲಿಲ್ಲ. ಆದ್ರೆ ಆ ಸಮಯದಲ್ಲಿ ನನಗೆ ಧೈರ್ಯ ತುಂಬಲು ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮ ನೋವನ್ನು ನಾವು ಹಂಚಿಕೊಳ್ಳಬೇಕು. ಯಾಕಂದ್ರೆ ನಿಮಗಾಗಿರುವ ನೋವು ನಮಗೂ ಆಗಿದೆ. ನಮ್ಮದು ಅದೇ ಮನಸ್ಥಿತಿ ಎಂದು ಹೇಳಿಕೊಂಡು ಮಂಡ್ಯದ ಅಭಿಮಾನಿಗಳ ನಮ್ಮ ಬಳಿ ಬಂದರು ಎಂದು ಭಾವುಕರಾದರು.
Advertisement
ಅಂಬರೀಶ್ ಅವರನ್ನು ಜನ ಎಷ್ಟು ಪ್ರೀತಿ ಮಾಡುತ್ತಿದ್ದರೆಂದು ನನಗೆ ಗೊತ್ತಿತ್ತು. ಆದ್ರೆ ಅವರ ಹೋದ ಮೇಲೆಯೂ ನನ್ನ ಹಾಗೂ ಅಭಿಷೇಕ್ ಮೇಲೆ ಇಷ್ಟೊಂದು ಪ್ರೀತಿ ಇಟ್ಟುಕೊಂಡು ಇನ್ನೂ ನಮ್ಮ ಹತ್ತಿರ ಬರುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಆ ಸಮಯದಲ್ಲಿ ಇಂದು ಚೂರು ಸಮಾಧಾನ ನನ್ನ ಮನಸ್ಸಿಗೆ ಸಿಕ್ಕಿತ್ತು. ಅಭಿಮಾನಿಗಳ ಪ್ರೀತಿ ವಿಶ್ವಾಸ ಕಳೆದುಕೊಳ್ಳಲು ನಮಗೂ ಇಷ್ಟವಿಲ್ಲ. ನಾವು ಜೀವಂತ ಇರೋವರೆಗೂ ಈ ಪ್ರೀತಿ ಇದ್ದೇ ಇರುತ್ತದೆ ಅನ್ನುವ ಮಾತನ್ನು ನಾನು ಹೇಳಿದ್ದೆ. ಆದ್ರೆ ಪ್ರೀತಿ ಸಂಬಂಧ ಇದ್ದೇ ಇರುತ್ತದೆ. ಅಂದ್ರೆ ನೀವು ಬಂದಾಗ ನಾವು, ನಾವು ಬಂದಾಗ ನೀವು ಮಾತಾಡಿಸುತ್ತೀರಿ ಅಷ್ಟೆ. ಆದ್ರೆ ನಿಮ್ಮ ಸೇವೆಯೂ ನಮಗೆ ಬೇಕಿದೆ ಎಂದು ಹೇಳಿದ್ರು ಅಂದ್ರು.
ಅಂಬರೀಶ್ ಅವರು ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ಆ ಕೆಲಸಗಳನ್ನು ಮಂದುವರಿಸುವುದಕ್ಕೆ ನೀವೇ ಮುಂದಾಗಬೇಕು. ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿಯನ್ನು ನೀವೇ ಹೊರಬೇಕು ಎಂದು ಸಾವಿರಾರು ಜನ ಹೇಳಿದ್ರು ಎಂದು ತಿಳಿಸಿದ್ರು.
ನಾನು ರಾಜಕಾರಣಿ ಅಲ್ಲ, ಅದರ ಬಗ್ಗೆಯೂ ಗೊತ್ತಿಲ್ಲ. 2-3 ವಾರಗಳಿಂದ ಮಂಡ್ಯದ ಹಲವಾರು ಊರು ಹಾಗೂ ಜನರನ್ನು ಭೇಟಿ ಮಾಡಿ ನನ್ನಿಂದ ಏನನ್ನು ಬಯಸುತ್ತೀರಾ ಎಂದು ಕೇಳಿದ್ದೆ. ಅವರೆಲ್ಲರದ್ದೂ ಒಂದೇ ಮಾತಾಗಿತ್ತು. ಯಾವುದೇ ಕಾರಣಕ್ಕೂ ಅಂಬರೀಶ್ ಅಣ್ಣನ ಪ್ರೀತಿಯನ್ನು ಕಳೆದುಕೊಳ್ಳಲು ನಾವು ರೆಡಿ ಇಲ್ಲ ಎಂಬುದಾಗಿತ್ತು. ನಿಮ್ಮ ಮೂಲಕ ನಾವು ಮತ್ತೆ ಅಂಬರೀಶ್ ಅಣ್ಣನ ಸ್ಥಾನವನ್ನು ತುಂಬಿದ್ರೆ ನಮಗೂ ಒಳ್ಳೆಯದಾಗುತ್ತೆ ಅಂತ ಹೇಳಿದ್ರು. ಹೀಗಾಗಿ ನನಗೆ ಹತ್ತಿರದವರೆಲ್ಲರನ್ನು ಕರೆದು ಸಲಹೆ ಪಡೆದೆ. ಆದ್ರೆ ಎಲ್ಲರೂ ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು ಅಂದ್ರು ಎಂದು ಸುಮಲತಾ ಹೇಳಿದ್ರು.
ಅಂಬರೀಶ್ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಲು ಅಂಬರೀಶ್ ಅಭಿಮಾನಿಗಳ ಮಾತು ಕೇಳಬೇಕು ಅನಿಸಿತ್ತು. ಈ ನನ್ನ ನಿರ್ಧಾರ ಇಂದು ಕೆಲವರಿಗೆ ಇಷ್ಟ ಆಗದೇ ಇರಬಹುದು, ಇನ್ನು ಕೆಲವರಿಗೆ ಅನುಕೂಲ ಇಲ್ಲದೇ ಇರಬಹುದು. ಆದ್ರೆ ಅಂಬರೀಶ್ ಅವರ ಮೇಲೆ ಇಟ್ಟಿರುವ ಪ್ರೀತಿ ಹಾಗೂ ವಿಶ್ವಸಾ ಕಾಪಾಡಿಕೊಳ್ಳಲು ಇಂದು ನಾನು ಈ ನಿರ್ಧಾರಕ್ಕೆ ಬಂದಿರೋದಾಗಿ ಹೇಳಿದ್ರು.
ಇದರಿಂದ ಒಂದಷ್ಟು ಸಂಬಂಧ ಹಾಗೂ ಸ್ನೇಹಗಳು ದೂರ ಆಗಿದೆ. ಆದ್ರೆ ನಾನು ತೆಗೆದುಕೊಂಡ ನಿರ್ಧಾರ ಯಾರನ್ನು ದೂರ ಮಾಡುವುದಕ್ಕಲ್ಲ. ಈ ಹೆಜ್ಜೆ ಹಾಕೋದಕ್ಕೆ ನನಗೆ ಬೇಕಾದಷ್ಟು ಧೈರ್ಯ, ಆತ್ಮಸ್ಥೈರ್ಯ ಬೇಕಾಗಿತ್ತದೆ. ಅದನ್ನು ನನಗೆ ಜನ ಕೊಟ್ಟಿದ್ದಾರೆ ಎಂದರು.
ಪುತ್ರ ಅಭಿಷೇಕ್ ರೊಂದಿಗೆ ಸುಮಲತಾ ಅವರಿಗೆ ನಟ ಯಶ್, ದರ್ಶನ್, ದೊಡ್ಡಣ್ಣ ಹಾಗೂ ರಾಕ್‍ಲೈನ್ ವೆಂಕಟೇಶ್ ಸಾಥ್ ನೀಡಿದ್ರು.