ಬೆಂಗಳೂರು: ಲಿವ್-ಇನ್-ರಿಲೇಶನ್ ಶಿಪ್ ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಗ್ಯಾಸ್ ಸಿಲಿಂಡರ್ ನಲ್ಲಿ ಹೊಡೆದು ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂ ನಲ್ಲಿ ಶನಿವಾರ ನಡೆದಿದೆ.
26 ವರ್ಷದ ಶಶಿಕಲಾಳನ್ನು 30 ವರ್ಷದ ವೆಂಕಟ್ ಗಿರಿಯಪ್ಪ ಕೊಲೆ ಮಾಡಿದ್ದಾನೆ. ವೆಂಕಟ್ ಗಿರಿಯಪ್ಪ ಟೊಮೆಟೋ ಮಾರಾಟಗಾರನಾಗಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿ ಶಶಿಕಲಾ ಜೊತೆ ಲಿವ್-ಇನ್ ರಿಲೇಶನ್ ಶಿಪ್‍ನಲ್ಲಿದ್ದನು. ಈ ಜೋಡಿ ಜೊತೆ ಮಹಿಳೆಯ ಮೂರು ವರ್ಷದ ಮಗಳು ಕೂಡ ವಾಸಿಸುತ್ತಿದ್ದಳು.
Advertisement
ಈ ಮೂವರೂ ಕೆ.ಆರ್ ಪುರಂನ ಬಾಡಿಗೆ ಮನೆಯೊಂದರಲ್ಲಿ ಕಳೆದ 8 ತಿಂಗಳಿನಿಂದ ವಾಸಿಸುತ್ತಿದ್ದರು. ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಈ ಜೋಡಿ ತಾವು ಸತಿ-ಪತಿಗಳಂತೆ ಪೋಸ್ ಕೊಡುತ್ತಿದ್ದರು.
Advertisement
Advertisement
ಈ ಮಧ್ಯೆ ವೆಂಕಟ್ ಗಿರಿಯಪ್ಪನಿಗೆ ಶಶಿಕಲಾ ಮೇಲೆ ಅನುಮಾನ ಮೂಡಿದೆ. ಶಶಿಕಲಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಕಳೆದ ಬುಧವಾರ ಆಕೆಯ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಸ್ಥಳೀಯರ ಎದುರೇ ಮಹಿಳೆಯ ಕಗ್ಗೊಲೆ:
ವೆಂಕಟ್ ಹಾಗೂ ಶಶಿಕಲಾ ಜಗಳವಾಡುತ್ತಿದ್ದ ಸಂದರ್ಭದಲ್ಲಿ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ ಇಬ್ಬರ ಜಗಳವನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಇಬ್ಬರ ಜಗಳವನ್ನು ಸ್ಥಳೀಯರು ಹೇಗೋ ಬಿಡಿಸಿ ಸಮಾಧಾನಪಡಿಸಿ ತೆರಳಿದರು. ಆ ಬಳಿಕ ಮತ್ತೆ ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಶಶಿಕಲಾ ಮೇಲೆ ವೆಂಕಟ್ ಹಲ್ಲೆ ಮಾಡಿದ್ದಾನೆ. ಈ ವೇಳೆಯೂ ಅಕ್ಕ-ಪಕ್ಕದ ಮನೆಯವರು ಬಂದು ಶಶಿಕಲಾ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ವೆಂಕಟ್ ಮನೆಯೊಳಗಿಂದ ಬಾಗಿಲು ಹಾಕಿಕೊಂಡಿದ್ದಾನೆ. ಪರಿಣಾಮ ಸ್ಥಳೀಯರಿಗೆ ಏನೂ ಮಾಡಲು ಸಾಧ್ಯವಾಗಿಲ್ಲ.
ಹೀಗಾಗಿ ಅವರ ಕಿಟಕಿ ಮೂಲಕ ಮನೆಯ ಹೊರಗಿನಿಂದ ಶಶಿಕಲಾಳನ್ನು ಕೊಲೆಗೈಯಬೇಡ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ವೆಂಕಟ್, ಶಶಿಕಲಾ ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸ್ ಅಧಿಕಾರಿಗೆ ವಿವರಿಸಿದ್ದಾರೆ.
ನೆರೆಹೊರೆಯವರ ಮಾತನ್ನು ಲೆಕ್ಕಿಸದ ವೆಂಕಟ್ ನೇರವಾಗಿ ಅಡುಗೆ ಮನೆಗೆ ತೆರಳಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶಶಿಕಲಾ, ಮನೆ ಬಾಗಿಲು ತೆಗೆದು ಓಡಿ ಹೋಗಲು ಪ್ರಯತ್ನಿಸಿದ್ದಾಳೆ. ಆದರೆ ಶಶಿಕಲಾ ಬಾಗಿಲು ಹತ್ತಿರ ಬರುತ್ತಿದ್ದಂತೆಯೇ ಗ್ಯಾಸ್ ಸಿಲಿಂಡರ್ ನೊಂದಿಗೆ ಬಂದ ವೆಂಕಟ್, ಆಕೆಯ ತಲೆಗೆ ಹೊಡೆದಿದ್ದಾನೆ. ಪರಿಣಾಮ ಶಶಿಕಲಾ ಕುಸಿದುಬಿದ್ದಿದ್ದಾಳೆ. ಹೀಗೆ ಬಿದ್ದವಳ ಮೇಲೂ ಸಿಲಿಂಡರ್ ನಿಂದ ತಲೆಗೆ ಜಜ್ಜಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಶಶಿಕಲಾ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡ ಸ್ಥಳೀಯರು, ಬಾಗಿಲು ತೆರೆಯಿರಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಎಂದು ವೆಂಕಟ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ವೆಂಕಟ್ ಮಾತ್ರ ಪೊಲೀಸರು ಬರುವವರೆಗೆ ಯಾವುದೇ ಕಾರಣಕ್ಕೂ ಬಾಗಿಲು ತೆರೆಯಲ್ಲ ಎಂದು ಪಟ್ಟು ಹಿಡಿದಿದ್ದಾನೆ. ನಂತರ 3 ಗಂಟೆ ಸುಮಾರಿಗೆ ಕ ಆರ್ ಪುರಂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿ ವೆಂಕಟ್ ನನ್ನು ಬಂಧಿಸಿದ್ದಾರೆ.
ಘಟನೆ ನಡೆದಾಗ ಶಶಿಕಲಾ ಮಗಳು ನಿದ್ದೆ ಮಾಡಿದ್ದಳು. ವಿಚಾರಣೆಯ ವೇಳೆ ವೆಕಂಟ್, ನಾನು ಶಶಿಕಲಾ ಮದುವೆ ಆಗಿಲ್ಲ ಎಂದು ಹೇಳಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕೊಲೆಗೆ ಬಳಸಿದ ಸಿಲಿಂಡರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಶಿಕಲಾ ಮೃತದೇಹವನ್ನು ಆಕೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.