ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಅನ್ನೋದು ದೆಹಲಿಯಲ್ಲಿ ಇಂದು ತೀರ್ಮಾನವಾಗುವ ಸಾಧ್ಯತೆ ಇದೆ. ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಗೆ ಹೈ ಕಮಾಂಡ್ ಬುಲಾವ್ ನೀಡಿದ ಹಿನ್ನೆಲೆಯಲ್ಲಿ ಅವರು ದೆಹಲಿ ತಲುಪಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಜೊತೆ ಡಿಕೆಶಿ ಇಂದು ಮಾತುಕತೆ ನಡೆಸಲಿದ್ದಾರೆ.
ಕೆಪಿಸಿಸಿಗೆ ಡಿ.ಕೆ ಶಿವಕುಮಾರ್ ರನ್ನ ಅಧ್ಯಕ್ಷರನ್ನಾಗಿಸಲು ಸೋನಿಯ ಗಾಂಧಿ ಮನವೊಲಿಸುವ ಸಾಧ್ಯತೆ ಇದೆ. ಡಿಕೆಶಿ ಒಪ್ಪಿದರೆ ಕೆಪಿಸಿಸಿಯ ನೂತನ ಸಾರಥಿ ಇಂದೇ ಅಂತಿಮವಾಗಲಿದೆ. ಕೆಪಿಸಿಸಿ ಸಾರಥ್ಯ ವಹಿಸಲು ಡಿಕೆಶಿ ಒಪ್ಪದಿದ್ದರೆ ಬೇರೆಯವರನ್ನ ಹುಡುಕಬೇಕಾದ ಅನಿವಾರ್ಯತೆಗೆ ಕಾಂಗ್ರೆಸ್ ಹೈ ಕಮಾಂಡ್ ಸಿಲುಕಲಿದೆ.
Advertisement
Advertisement
ಹೈಕಮಾಂಡ್ ಗೆ ಡಿ.ಕೆ ಶಿವಕುಮಾರ್ ಪರವಾಗಿ ಒಲವಿದ್ದರೂ ಸಿದ್ದರಾಮಯ್ಯ ಬಣ ಹಾಗೂ ಮೂಲ ಕಾಂಗ್ರೆಸ್ ಬಣ ಎರಡರಿಂದಲೂ ಡಿಕೆಶಿ ಪೈಪೋಟಿ ಎದುರಿಸಬೇಕಾದ ಅನಿವಾರ್ಯತೆ ಡಿಕೆಶಿಗೆ ಎದುರಾಗಿದೆ.
Advertisement
ಈ ಹಿಂದೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದ ಡಿಕೆಶಿ, ನಾನು ಯಾವುದೇ ಸ್ಥಾನಕ್ಕೂ ಅರ್ಜಿ ಹಾಕಿಕೊಂಡು ಓಡಾಡುವುದಿಲ್ಲ. ಸುಮ್ಮನೆ ಟಿವಿಯಲ್ಲಿ ನನ್ನ ಹೆಸರು ಹಾಕುತ್ತೀರಿ. ಹೀಗೆ ಹಾಕಿ ನನಗೆ ಯಾವ ಹುದ್ದೆಯೂ ಸಿಗದಂತೆ ಮಾಡುತ್ತೀರಿ ಎಂದು ಹೇಳಿ ನಕ್ಕಿದ್ದರು.
Advertisement
ಹುಬ್ಬಳ್ಳಿಯಲ್ಲಿ ಎರಡು ತಿಂಗಳ ಹಿಂದೆ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗುತ್ತಾ ಎನ್ನುವ ಪ್ರಶ್ನೆಗೆ ಸಿಡಿಮಿಡಿಗೊಂಡಿದ್ದರು. ನಿಮಗ್ಯಾರು ಹೇಳಿದರು? ಊಹಾಪೋಹ ಸೃಷ್ಟಿಸಬೇಡಿ. ಅದೆಲ್ಲಾ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಸದ್ಯಕ್ಕೆ ಅಧ್ಯಕ್ಷರ ಬದಲಾವಣೆ ವಿಚಾರ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ನೀವೇ ಎಲ್ಲಾ ಊಹಾಪೋಹಗಳನ್ನು ಸೃಷ್ಟಿ ಮಾಡುವುದು ಎಂದು ಮಾಧ್ಯಮಗಳ ವಿರುದ್ಧ ಗುಡುಗಿದ್ದರು.