– 100 ರೂ. ಗೆ ಎಲ್ಲಾ ರೀತಿಯ ಮೀನಿನ ಊಟ
ಬೆಂಗಳೂರು: ಮೀನುಗಾರಿಕಾ ಸಚಿವರು ಹೊಸ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದ್ದು, ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಿಂತನೆ ನಡೆಸಿದ್ದಾರೆ.
ಜಿಲ್ಲೆ ಹಾಗೂ ತಾಲೂಕಿಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಉತ್ತಮ ಮೀನೂಟ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಬಡವರಿಗೆ, ಮಧ್ಯಮ ವರ್ಗಕ್ಕೆ ಉತ್ತಮ ಊಟ ನೀಡುವ ಯೋಜನೆ ಜಾರಿಗೆ ತರಲು ತೀರ್ಮಾನ ಮಾಡಲಾಗಿದೆ.
Advertisement
Advertisement
ಕನಿಷ್ಠ 100 ರೂಪಾಯಿಗೆ ಎಲ್ಲಾ ರೀತಿಯ ಮೀನಿನ ಊಟ ನೀಡುವ ಯೋಜನೆ ಇದಾಗಿದ್ದು, ಸಾಮಾನ್ಯ ಹೋಟೆಲ್ ಗಿಂತ ಕಡಿಮೆ ದರದಲ್ಲಿ ಮೀನಿನ ಊಟ ಯೋಜನೆ ಜಾರಿಗೆ ತರಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಯಾರಿ ನಡೆಸಿದ್ದಾರೆ. ಈ ಬಗ್ಗೆ ಸಚಿವರು ಈಗಾಗಲೇ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಅಲ್ಲದೆ ಸದ್ಯದಲ್ಲೇ ಸರ್ಕಾರದ ಗಮನಕ್ಕೂ ತಂದು ಯೋಜನೆ ಜಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ಧರಿಸಿದ್ದಾರೆ.
Advertisement
Advertisement
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸಲಾಗುತ್ತಿದ್ದು, ಸದ್ಯ ಆರಂಭಿಕವಾಗಿ ಪ್ರತಿ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ತೆರೆಯಲಾಗುತ್ತಿದೆ. ಇದರ ಪ್ರಸ್ತಾವನೆಯನ್ನು ತಯಾರಿಸಿ ಮೀನುಗಾರಿಕೆ ಇಲಾಖೆ ಈಗಾಗಲೇ ಆರ್ಥಿಕ ಇಲಾಖೆಗೂ ಕಳುಹಿಸಿದೆ. ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕ ಕೂಡಲೇ ಮತ್ಸ್ಯದರ್ಶಿನಿ ಹೋಟೆಲ್ ಆರಂಭವಾಗುತ್ತದೆ.
ಸದ್ಯ 100 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸಲಾಗುತ್ತಿದೆ. ಕೆಎಫ್ ಡಿಸಿ ಮಳಿಗೆಗಳ ಮೂಲಕವೇ ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ಇಡೀ ರಾಜ್ಯದಲ್ಲಿ ಕೆಎಫ್‍ಡಿಸಿ ಮತ್ಸ್ಯದರ್ಶಿನಿಗಳನ್ನು ಒಂದು ಬ್ರಾಂಡ್ ಮಾಡಲು ಮೀನುಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.
ಸದ್ಯ ಈ ಇಲಾಖೆಯಡಿ ಬೆರಳೆಣಿಕೆಯಷ್ಟು ಮಾತ್ರ ಮತ್ಸ್ಯದರ್ಶಿನಿ ಹೋಟೆಲ್ ಗಳು ನಡೆಯುತ್ತಿವೆ. ಹೊರಗಿನ ಹೋಟೆಲ್ ಗಳಲ್ಲಿ ಒಂದು ಮೀನೂಟಕ್ಕೆ 400 ರೂ ಯಿಂದ 600 ರೂ ಕೊಡಬೇಕು. ಕೆಲವು ವಿಶೇಷ ಮೀನುಗಳು ಸೇರಿದರೆ ಊಟದ ದರ 1000 ರೂ. ಆಗಲಿದೆ. ಹೀಗಾಗಿ ಸರ್ಕಾರ ರಿಯಾಯ್ತಿ ದರದಲ್ಲಿ ರಾಜ್ಯದ ಜನರಿಗೆ ಮೀನೂಟ ಬಡಿಸಲು ನಿರ್ಧಾರ ಮಾಡಿದೆ.