ಬೆಂಗಳೂರು: ಮಧ್ಯರಾತ್ರಿ ಕೋರಮಂಗಲದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೊಸೂರು ಶಾಸಕ ಪ್ರಕಾಶ್ ಪುತ್ರ ಅರುಣಾಸಾಗರ್ ಹಾಗೂ ಭಾವಿ ಪತ್ನಿ ಬಿಂದು ಕೂಡ ದುರ್ಮರಣ ಹೊಂದಿದ್ದಾರೆ.
Advertisement
ಮಧ್ಯ ರಾತ್ರಿ 1.30ರ ಸುಮಾರಿಗೆ ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ನಡೆದ ಘಟನೆಯಲ್ಲಿ ಕರುಣಾಸಾಗರ ಹಾಗೂ ಬಿಂದು (28) ಸೇರಿ 7 ಜನ ಸಾವನ್ನಪ್ಪಿದ್ದಾರೆ. ಇಶಿತಾ (21), ಡಾ.ಧನುಶಾ (21), ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ (23) ಮೃತ ದುರ್ದೈವಿಗಳು. ಅರುಣಾಸಾಗರ್ ಹೊಸೂರು ಡಿಎಂಕೆ ಶಾಸಕ ಪ್ರಕಾಶ್ ಅವರ ಪುತ್ರ. ಇದನ್ನೂ ಓದಿ: ಭೀಕರ ಅಪಘಾತವಾದರೂ ಆಡಿ ಕಾರಿನ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ?
Advertisement
ಕೆಎ 03 ಎಂವೈ 6666 ನಂಬರಿನ ಡೀಸೆಲ್ ಮಾಡೆಲ್ ಕಾರು ತಮಿಳುನಾಡಿನ ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿಗೆ ಸೇರಿದ್ದು, 2015ರಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ನೋಂದಣಿಯಾಗಿದೆ. ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿ ಹೊಸೂರು ರಸ್ತೆಯಲ್ಲಿದೆ. ಹಾಲೋ ಬ್ರಿಕ್ಸ್, ಎಂ ಸ್ಯಾಂಡ್ ಮರಳು ತಯಾರಿಸುವ ಕಂಪನಿ ಇದಾಗಿದೆ. ಕಂಪನಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೂಡ ಬ್ರಾಂಚ್ ಹೊಂದಿದೆ. ಇದನ್ನೂ ಓದಿ : ಕೋರಮಂಗಲದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಬಲಿ
Advertisement
Advertisement
ಅರುಣಾಸಾಗರ್ ಸ್ನೇಹಿತರ ಜೊತೆ ಕೋರಮಂಗಲದ ಝೋಲೋ ಪಿಜಿಯಲ್ಲಿ ಉಳಿದುಕೊಳ್ಳುತ್ತಿದ್ದರು. ರಾತ್ರಿ ಪಾರ್ಟಿ ಮಾಡುತ್ತಿದ್ದರು. ಅದೇ ರೀತಿ ಸೋಮವಾರ ರಾತ್ರಿ ಸಹ ಪಾರ್ಟಿ ಮುಗಿಸಿ ಬರುವಾಗ ಅಪಘಾತ ಸಂಭವಿಸಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ.
ವೇಗವಾಗಿ ಬಂದು ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಕಾರ್ ಡಿಕ್ಕಿ ಹೊಡೆದಿದೆ. ಆಡಿ ಕ್ಯೂ 3 ಕಾರಿನಲ್ಲಿದ್ದ ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಒಟ್ಟು 7 ಜನ ಸಾವನ್ನಪ್ಪಿದ್ದಾರೆ. 6 ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಎಲ್ಲರೂ 25-30ರ ವಯೋಮಾನದವರು ಮತ್ತು ಸ್ನೇಹಿತರು.
ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದು, ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಾವನ್ನಪ್ಪಿರುವ ಎಲ್ಲರ ಮಾಹಿತಿ ಲಭ್ಯವಾಗಿದೆ. ದಂಪತಿ, ಉಳಿದಂತೆ ಒಬ್ಬರು ಹರಿಯಾಣ ಮೂಲದವರು, ಹುಬ್ಬಳಿ ಮೂಲದವರು ಇಬ್ಬರು ಇದ್ದರು. ಅಕ್ಷಯ್ ಗೋಯಲ್ ಕೇರಳ ಮೂಲದವರು, ಉತ್ಸವ್ – ಹರ್ಯಾಣ, ರೋಹಿತ್ – ಹುಬ್ಬಳ್ಳಿ, ಕರುಣಾ ಸಾಗರ್ ಹೊಸೂರು ಮೂಲದವರು. ಉಳಿದವರು ಕೋರಮಂಗಲದ ಜೋಲೋ ಸ್ಟೇ ಪಿ.ಜಿಯಲ್ಲಿ ವಾಸವಿದ್ದರು. ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಈ ಕುರಿತು ಮಾಹಿತಿ ನೀಡಿದ್ದು, ಆಡಿ ಕಾರು ನೇರವಾಗಿ ಪುಟ್ ಪಾತ್ ಮೇಲೆ ಹತ್ತಿ, ರಭಸವಾಗಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ, ಹೀಗಾಗಿ ಏರ್ ಬ್ಯಾಗ್ ಓಪನ್ ಆಗಿಲ್ಲ. ಕಾರು ನಜ್ಜುಗುಜ್ಜಾಗಿದ್ದು, ಏಳು ಜನ ಸಾವನ್ನಪ್ಪಿದ್ದಾರೆ. ನಮಗೆ ಸಿಕ್ಕಿರುವ ವಿಳಾಸವನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ನಿರ್ಲಕ್ಷ್ಯದ ಚಾಲನೆ ಘಟನೆಗೆ ಕಾರಣವಾಗಿದೆ. ನಿರ್ಲಕ್ಷ್ಯದ ಚಾಲನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮಾಡಲಾಗುತ್ತಿದೆ, ಮೇಲ್ನೋಟಕ್ಕೆ ಸಂಚಾರಿ ನಿಯಮ ಸಂಪೂರ್ಣವಾಗಿ ಉಲ್ಲಂಘನೆ ಆಗಿದೆ ಎಂದು ತಿಳಿಸಿದರು.