ಬೆಂಗಳೂರು: ತನ್ನದೇ ಆದ ಬ್ರ್ಯಾಂಡ್ ಮೌಲ್ಯ ಹೊಂದಿರುವ ಕೆಎಂಎಫ್ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಿಸಲು ಮುಂದಾಗಿದೆ. ಕಾಫಿ ಡೇ ಮಾದರಿಯಲ್ಲಿ ನಂದಿನಿ ಔಟ್‍ಲೆಟ್ ತೆರೆಯಲು ತೀರ್ಮಾನಿಸಿದೆ. ಈ ಕುರಿತಂತೆ ಕೆಎಂಎಫ್ ಆಡಳಿತ ಮಂಡಳಿ ಈಗಾಗಲೇ ಯೋಜನೆಯ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಮುಂದಿನ ವರ್ಷದ ಮಾರ್ಚ್ ಅಂತ್ಯಕ್ಕೆ ರಾಜ್ಯಾದ್ಯಂತ ಕೆಎಂಎಫ್ ಮಾದರಿಯ ನಂದಿನಿ ಔಟ್‍ಲೆಟ್ ತೆರೆಯಲು ನಿರ್ಧರಿಸಿದೆ.
Advertisement
ಅಂದಹಾಗೆ ಸಾಮಾನ್ಯ ವರ್ಗದಿಂದ ಹಿಡಿದು ಎಲ್ಲ ವರ್ಗದವರಿಗೂ ಕೆಎಂಎಫ್ ಉತ್ಪನ್ನಗಳು ಲಭ್ಯವಾಗುವಂತೆ ಕಾಫಿ ಡೇ ಮಾದರಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ನಂದಿನಿ ಕೆಫೆ` ತೆರೆಯಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರಿನ ಜಯ ನಗರದಲ್ಲಿ ನಂದಿನಿ ಕೆಫೆ ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ಕನಿಷ್ಠ 25ರಿಂದ 30 ನಂದಿನಿ ಕೆಫೆಗಳನ್ನು ತೆರೆಯಲು ಕೆಎಂಎಫ್ ನಿರ್ಧರಿಸಿದೆ. ಇದರೊಂದಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
Advertisement
Advertisement
ಈಗ ಬೆಂಗಳೂರಿನಲ್ಲಿ 300ಕ್ಕೂ ಹೆಚ್ಚು ಕೆಎಂಎಫ್ ನಂದಿನಿ ಹಾಲು ಮಾರಾಟ ಕೇಂದ್ರಗಳಿವೆ. ಮುಂದಿನ ಐದು ವರ್ಷದಲ್ಲಿ ಎಲ್ಲ ಕೇಂದ್ರಗಳನ್ನು ಕಾಫಿ ಡೇ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ನಂದಿನಿ ಉತ್ಪನ್ನ ಮಾರಾಟ ಮಾಡುವ ಸಿಬ್ಬಂದಿಗೂ ಆಕರ್ಷಣೀಯ ಯೂನಿಫಾರ್ಮ್, ಕಾಫಿ ಡೇ ಮಾದರಿಯಲ್ಲಿ ಅಲ್ಲಿಗೆ ಬರುವ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಪ್ರಮುಖವಾಗಿ ಏರ್ ಪೋರ್ಟ್ ಗಳು, ಮಾಲ್‍ಗಳಲ್ಲಿ ನಂದಿನಿ ಕೆಫೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.
Advertisement
ರಾಜ್ಯದಲ್ಲಿ ಸದ್ಯ ಪ್ರತಿ ದಿನ 70 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೆಎಂಎಫ್ ಉತ್ಪನ್ನಗಳಿಂದ ಪ್ರತಿ ವರ್ಷ ಸುಮಾರು 15 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಲಾಗುತ್ತಿದೆ. ಆದರೆ ಉತ್ತಮ ಗುಣಮಟ್ಟ ಹಾಗೂ ಆರೋಗ್ಯಯುತ ಉತ್ಪನ್ನಗಳನ್ನು ತಯಾರಿಸಿದರೂ, ಅದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗದ ಕಾರಣ ನಂದಿನಿ ಉತ್ಪನ್ನಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಸೃಷ್ಠಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹೊಸ ಮಾದರಿಯಲ್ಲಿ ಬ್ರ್ಯಾಂಡ್ ಸೃಷ್ಠಿಸಿ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಕೆಎಂಎಫ್ ಆಡಳಿತ ಮಂಡಳಿ ನಿರ್ಧರಿಸಿದ್ದು, ಆ ಮೂಲಕ ಮುಂದಿನ ಐದು ವರ್ಷದಲ್ಲಿ ಮಂಡಳಿಯ ವಾರ್ಷಿಕ ವಹಿವಾಟು ಸುಮಾರು 35 ಸಾವಿರ ಕೋಟಿಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.