ಬೆಂಗಳೂರು: ಪೈಲ್ವಾನ್ ಸಿನಿಮಾ ಸಂಪಾದನೆಯ ಬಗ್ಗೆ ಮಾತನಾಡುತ್ತಾ ನನಗೆ ದುಡ್ಡು ಮುಖ್ಯವಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯ ಸಂದರ್ಶನದಲ್ಲಿ ಪೈಲ್ವಾನ್ ಸಿನಿಮಾ ನೂರು ಕೋಟಿ ಹಣ ಮಾಡಿದೆ ಅಭಿಮಾನಿಗಳು ಅದರ ಸಂಭ್ರಮಾಚರಣೆ ಮಾಡಲು ಕಾಯುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದುಡ್ಡು ನನಗೆ ಮುಖ್ಯವಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ. ನಾಲ್ಕು ಜನಕ್ಕೆ ತೋರಿಸೋಕೆ ಕೇಕ್ ಕಟ್ ಮಾಡಬೇಕು ಅಷ್ಟೇ. ಸಿನಿಮಾ ಚೆನ್ನಾಗಿ ಇದ್ದರೆ ಸಾಕು ಎಂದು ಹೇಳಿದರು.
ಸಿನಿಮಾ ಜನರಿಗೆ ಇಷ್ಟವಾದರೆ ಸಾಕು. ಅದು ನೂರು ಕೋಟಿ ದಾಟಿದರೆಷ್ಟು ನೂರು ರೂ. ದಾಟಿದರೆಷ್ಟು. ಈ ರೀತಿಯ ಸಮಾರಂಭಗಳು ನನಗೆ ಇಷ್ಟವಾಗಲ್ಲ. ನಾನು ಈ ರೀತಿಯ ವಿಚಾರದಲ್ಲಿ ಭಾಗಿಯೂ ಆಗಲ್ಲ. ಸಿನಿಮಾ ಚೆನ್ನಾಗಿದೆ. ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಆಗಲೇ ಗೆದ್ದಿದೆ. ಇದರ ಮುಂದೆ ಹಣವನ್ನು ಲೆಕ್ಕಹಾಕಬಾರದು. ಸಿನಿಮಾವನ್ನು ಜನರು ನೋಡುತ್ತಿರುವುದೇ ಸಂಭ್ರಮ ನಮಗೆ ಎಂದು ಕಿಚ್ಚ ತಿಳಿಸಿದರು. ಇದನ್ನು ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್
ನಮ್ಮ ಜೀವದಲ್ಲಿ ಸಿನಿಮಾ ಎಷ್ಟು ಕೋಟಿ ಸಂಪಾದನೆ ಮಾಡಿತು ಎಂಬುದು ಮುಖ್ಯವಲ್ಲ. ನಾವು ವ್ಯಕ್ತಿಗಳಾಗಿ ಎಲ್ಲಿಗೆ ತಲುಪಿದ್ದೇವೆ ಎಂಬುದನ್ನು ನೋಡಿಕೊಳ್ಳೋಣ. ಈ ಸಮಯದಲ್ಲಿ ಕೋಟಿ ಬಗ್ಗೆ ಮಾತನಾಡುವುದು ಚಿಕ್ಕತನ. ದಾಟಿದರೆ ಖುಷಿಯಾಗಿತ್ತೆ ನಿರ್ಮಾಪಕರಿಗೆ ಒಳ್ಳೆಯಾದಗುತ್ತದೆ. ಮುಂದಿನ ಸಿನಿಮಾ ಇನ್ನೂ ಸ್ವಲ್ಪ ಜಾಸ್ತಿ ದುಡ್ಡು ಹಾಕಿ ಚಿತ್ರ ತೆಗೆಯಲು ಹುಮ್ಮಸ್ಸು ಬರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಸಂಗೀತ ನಿರ್ದೇಶಕ ಅರ್ಜನ್ ಜನ್ಯ ಮತ್ತು ರವಿಶಂಕರ್ ಬಗ್ಗೆ ಮಾತನಾಡಿ, ಇಬ್ಬರು ಒಳ್ಳೆಯ ಕಲೆ ಇರುವ ವ್ಯಕ್ತಿಗಳು. ಅವರವರ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಈ ಇಬ್ಬರು ಕಲಾವಿದರೂ ನನ್ನ ಕೆಂಪೇಗೌಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯ ಆದರು ಎಂದು ಹೇಳಲು ಬಹಳ ಖುಷಿಯಾಗುತ್ತೆ ಎಂದು ಹೇಳಿದರು ಮತ್ತು ಪೈಲ್ವಾನ್ ರೀತಿ ಇನ್ನೊಂದು ಸಿನಿಮಾ ಬಂದರೆ ಮಾಡುತ್ತೇನೆ ಎಂದು ತಿಳಿಸಿದರು.