ಬೆಂಗಳೂರು: ಕೊರೊನಾ ಭೀತಿ ನಡುವೆಯೂ ನಿಗದಿಯಂತೆ ಇಂಡಿಯನ್ ಪ್ರಿಮಿಯರ್ ಲೀಗ್‍ನ 13ನೇ ಆವೃತ್ತಿ ಟೂರ್ನಿ ನಡೆಯುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆಯಷ್ಟೇ ಸ್ಪಷ್ಟಪಡಿಸಿದ್ದರು. ಆದರೆ ಕೊರೊನಾ ದೇಶದಲ್ಲಿ ಹಬ್ಬುತ್ತಿರುವ ಪರಿ ನೋಡಿದರೆ ಐಪಿಎಲ್ ನಡೆಯುತ್ತಾ ಎಂಬ ಅನುಮಾನ ಶುರುವಾಗಿದೆ.
ಉದ್ಯಾನಗರಿಯಲ್ಲಿ ನಾಲ್ಕು ಪಾಸಿಟೀವ್ ಕೇಸ್‍ಗಳು ಪತ್ತೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕಿದೆ. ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಬೆಂಗಳೂರು ಸಿದ್ಧವಿಲ್ಲ. ಐಪಿಎಲ್ ಪಂದ್ಯಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪತ್ರ ಬರೆದಿದ್ದಾರೆ.
Advertisement
Advertisement
ಮಾರ್ಚ್ 29ರಿಂದ ಆರಂಭವಾಗಬೇಕಿರುವ ಐಪಿಎಲ್‍ನಲ್ಲಿ ಆರ್‌ಸಿಬಿಯ 7 ಲೀಗ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಬೇಕಿದೆ. ಐಪಿಎಲ್ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಡೆಯಬೇಕಿರುವ ಪ್ರಸಿದ್ಧ ಕರಗ ಮಹೋತ್ಸವವನ್ನು ಮುಂದೂಡಲು ಸಹ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.