ಬೆಂಗಳೂರು: ಕ್ರಿಶ್ ನಿರ್ದೇಶನದ ಕಪಟ ನಾಟಕ ಪಾತ್ರಧಾರಿ ಚಿತ್ರ ಈಗಾಗಲೇ ಎಲ್ಲ ದಿಕ್ಕುಗಳಿಂದಲೂ ಪ್ರೇಕ್ಷಕರನ್ನು ತನ್ನತ್ತ ಆಕರ್ಷಿಸಿಕೊಂಡಿದೆ. ಟ್ರೇಲರ್, ಹಾಡುಗಳೊಂದಿಗೆ ಪ್ರೇಕ್ಷಕರ ಮನದಂಗಳಕ್ಕೆ ಲಗ್ಗೆಯಿಟ್ಟಿರುವ ಈ ಸಿನಿಮಾ ಇದೇ ನವೆಂಬರ್ 8ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಮಧ್ಯಮ ವರ್ಗದ ಆಟೋ ಡ್ರೈವರ್ ಬದುಕಿನ ಕಥೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ನಾನಾ ಅಂಶಗಳೊಂದಿಗೆ ಕಳೆಗಟ್ಟಿಕೊಂಡಿರೋ ರಸವತ್ತಾದ ಕಥೆ ಈ ಸಿನಿಮಾದಲ್ಲಿದೆ. ಎಣಿಸಲು ನಿಂತರೆ ಅಸಂಗತವಾದಂತಹ ಅನೇಕಾನೇಕ ಆಕರ್ಷಣೆಗಳೂ ಈ ಚಿತ್ರದಲ್ಲಿವೆ. ಇದರ ಪ್ರಧಾನ ಆಕರ್ಷಣೆ ಏನು ಅಂತೊಂದು ಪ್ರಶ್ನೆಯಿಟ್ಟುಕೊಂಡು ಹುಡುಕಾಡಿದರೆ ಎದುರಾಗುವವರು ಇದರ ನಾಯಕ ಬಾಲು ನಾಗೇಂದ್ರ!
Advertisement
ಈ ಹಿಂದೆ ಕಡ್ಡಿಪುಡಿ ಮುಂತಾದ ಚಿತ್ರಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿ ಪ್ರತಿಭಾವಂತ ನಟ ಅನ್ನಿಸಿಕೊಂಡಿದ್ದವರು ಬಾಲು ನಾಗೇಂದ್ರ. ಆ ನಂತರ ಹುಲಿರಾಯ ಚಿತ್ರದ ಮೂಲಕ ನಾಯಕ ನಟನಾಗಿಯೂ ಬಾಲು ಭಾರೀ ಗೆಲುವನ್ನೇ ತನ್ನದಾಗಿಸಿಕೊಂಡಿದ್ದರು. ಆ ಚಿತ್ರದಲ್ಲಿ ಅವರು ಆವಾಹಿಸಿಕೊಂಡಿದ್ದ ಪಾತ್ರ, ಅನುಭವಿಸಿ ನಟಿಸಿದ್ದ ರೀತಿಗಳಿಗೆ ಕನ್ನಡದ ಪ್ರೇಕ್ಷಕರು ತಲೆದೂಗಿದ್ದರು. ಇಂತಹ ಹಿಟ್ ಸಿನಿಮಾ ನಂತರ ಬಾಲು ಮತ್ತೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಪ್ರೇಕ್ಷಕರ ಕುತೂಹಲಕ್ಕೆ ಉತ್ತರವಾಗಿ ಸದ್ದು ಮಾಡಿದ ಚಿತ್ರ ಕಪಟ ನಾಟಕ ಪಾತ್ರಧಾರಿ.
Advertisement
ಅಷ್ಟಕ್ಕೂ ಹುಲಿರಾಯ ಚಿತ್ರದ ನಂತರದಲ್ಲಿ ಬಾಲು ನಾಗೇಂದ್ರ ಅವರ ಮುಂದೆ ಅನೇಕ ಅವಕಾಶಗಳು ಬಂದಿದ್ದವು. ಆದರೆ ರಂಗಭೂಮಿಯಿಂದ ಬಂದು, ಸಾಹಿತ್ಯದ ಸಾಹಚರ್ಯವೂ ಇರುವ ಬಾಲು ಕಥೆಯ ಆಯ್ಕೆಯ ವಿಚಾರದಲ್ಲಿ ಬಲು ಚೂಸಿ. ಆದ್ದರಿಂದಲೇ ತಮಗೊಪ್ಪುವ ಕಥೆಗಾಗಿ ಕಾದು ಕೂತಿದ್ದ ಬಾಲು ನಾಗೇಂದ್ರ ಪಾಲಿಗೆ ತಾನೇ ತಾನಾಗಿ ಕಪಟ ನಾಟಕ ಪಾತ್ರಧಾರಿಯಾಗೋ ಅವಕಾಶ ಕೂಡಿ ಬಂದಿತ್ತು. ಅಷ್ಟಕ್ಕೂ ಒಂದೊಳ್ಳೆ ಕಥೆಗಾಗಿ ಬಾಲು ಅದೆಷ್ಟು ತದೇಕಚಿತ್ತದಿಂದ ಕಾದಿದ್ದರೋ, ತಮ್ಮ ಕಥಾ ನಾಯಕನ ಪಾತ್ರಕ್ಕಾಗಿ ನಿರ್ದೇಶಕ ಕ್ರಿಶ್ ಕೂಡ ಅದೇ ರೀತಿಯಲ್ಲಿಯೇ ಹುಡುಕಾಟ ನಡೆಸಿದ್ದರಂತೆ. ಯಾವಾಗ ಅವರು ಹುಲಿರಾಯ ಚಿತ್ರ ನೋಡಿದರೋ ಆಗಲೇ ಕಪಟ ನಾಟಕ ಪಾತ್ರಧಾರಿ ಚಿತ್ರಕ್ಕೆ ಬಾಲು ಅವರನ್ನೇ ಕ್ರಿಶ್ ಪಕ್ಕಾ ಮಾಡಿಕೊಂಡಿದ್ದರಂತೆ.
Advertisement
Advertisement
ಇಲ್ಲಿ ಬೇಜವಾಬ್ದಾರಿ ಹುಡುಗನಾಗಿ, ಆಟೋ ಡ್ರೈವರ್ ಆಗಿ, ಪ್ರೇಮಿಯಾಗಿ ಬಾಲು ನಾಗೇಂದ್ರ ಇಡೀ ಚಿತ್ರದುದ್ದಕ್ಕೂ ಆ ಪಾತ್ರವನ್ನು ನುಂಗಿಕೊಂಡಂತೆ ನಟಿಸಿದ್ದಾರಂತೆ. ಅವರೋರ್ವ ಅದ್ಭುತ ನಟ ಅನ್ನೋದು ಈ ಸಿನಿಮಾ ಮೂಲಕ ಮತ್ತೊಮ್ಮೆ ಸಾಬೀತಾಗಲಿದೆ ಎಂಬ ಭರವಸೆ ಕೂಡ ನಿರ್ದೇಶಕ ಕ್ರಿಶ್ ಅವರಲ್ಲಿದೆ. ಈ ಚಿತ್ರದಲ್ಲಿ ಸಂಗೀತಾ ಭಟ್ ನಾಯಕಿಯಾಗಿ ಬಾಲು ನಾಗೇಂದ್ರರಿಗೆ ಜೋಡಿಯಾಗಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್, ಪ್ರೀತಿ, ಆಕ್ಷನ್ ಮತ್ತು ಹಾರರ್ ಅಂಶಗಳೊಂದಿಗೆ ಈ ಚಿತ್ರ ಸಂಪೂರ್ಣ ಮನೋರಂಜನೆಯ ಪ್ಯಾಕೇಜಿನಂತೆ ಮೂಡಿ ಬಂದಿದೆಯಂತೆ. ಅದೆಲ್ಲವೂ ಇದೇ ನವೆಂಬರ್ 8ರಂದು ಎಲ್ಲರೆದುರು ಅನಾವರಣಗೊಳ್ಳಲಿದೆ.