ಬೆಂಗಳೂರು: ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆದ ಬೆಂಗಳೂರು ಕಂಬಳಕ್ಕೆ (Bengaluru Kambala) ಅದ್ಧೂರಿ ತೆರೆ ಬಿದ್ದಿದೆ. ತುಳುನಾಡಿನ ಸಾಂಸ್ಕೃತಿಕ ಕ್ರೀಡೆಗೆ ಜನರಿಂದ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಲಕ್ಷಾಂತರ ಜನರು ಎರಡು ದಿನಗಳ ಕರಾವಳಿ ಕಂಬಳವನ್ನ ಕಣ್ತುಂಬಿಕೊಂಡಿದ್ದಾರೆ. ನಿನ್ನೆ ತಡರಾತ್ರಿ ವರೆಗೆ ಕಂಬಳದ ಕೋಣಗಳ ಓಟವನ್ನ ಜನರು ಕಣ್ತುಂಬಿಕೊಂಡಿದ್ದು, ಕಂಬಳದ ಕೊನೆ ದಿನವಾದ ಇಂದು (ಭಾನುವಾರ) ಕಂಬಳದ ಕಲರವ ಜೋರಾಗಿತ್ತು.
ರಾಜ್ಯ ರಾಜಧಾನಿಯಲ್ಲಿ ಕರಾವಳಿಯ ಕಂಬಳಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ ಆರಂಭವಾದ ಕಂಬಳಕ್ಕೆ ತಡರಾತ್ರಿವರೆಗೂ ಉತ್ಸುಕತೆಯಿಂದ ಲಕ್ಷಾಂತರ ಜನರು ಭಾಗಿಯಾದ್ರೆ, ಇಂದು ಬೆಳಿಗ್ಗೆಯಿಂದಲೇ ಅರಮನೆ ಮೈದಾನಕ್ಕೆ ಬಂದ ಲಕ್ಷಾಂತರ ಜನರು ಕಂಬಳವನ್ನ ಕಣ್ತುಂಬಿಕೊಂಡರು. ಹಗ್ಗದ ಹಿರಿಯ, ಹಗ್ಗದ ಕಿರಿಯ, ಕೆನೆಹಲಗೆ, ಅಡ್ಡ ಪಲಾಯಿ ಹೀಗೆ ಒಂದರ ಹಿಂದೆ ಒಂದರಂತೆ ಸ್ಪರ್ಧೆ ನಡೀತಿದ್ರೆ ನೆರೆದಿದ್ದ ಜನರು ತಮ್ಮ ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸಿದ್ರು. ಇದನ್ನೂ ಓದಿ: Bengaluru Kambala: ಚಿನ್ನದ ಪದಕ ಗೆದ್ದ ಕಾಂತಾರ ಕೋಣಗಳು!
ರಾಜ, ಮಹಾರಾಜ ಕೆರೆಯಲ್ಲಿ ಕೋಣಗಳ ಜೋಡಿ ಓಟದ ಮೂಲಕ ಗಮನಸೆಳೆದ್ರೆ, ಅತ್ತ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ನೃತ್ಯತಂಡಗಳು ಜನರ ಮನತಣಿಸಿದ್ವು. ವೀಕೆಂಡ್ ಹಿನ್ನೆಲೆ ಬೆಂಗಳೂರಿನಲ್ಲಿ ನೆಲೆಸಿರೋ ಕರಾವಳಿಯ ಜನರು ಮಾತ್ರವಲ್ಲದೇ ಸಿಲಿಕಾನ್ ಸಿಟಿ ಜನರು ಕೂಡ ಕಂಬಳ ಕಂಡು ಫುಲ್ ಖುಷ್ ಆಗಿದ್ರು. ಕೆನೆ ಹಲಗೆ ಓಟದಲ್ಲಿ ಆರುವರೆ ಕೋಲಿಗೆ ನೀರು ತಾಗಿಸಿ ಬೋಳಂಬಳ್ಳಿ ಅಪ್ಪು ಮತ್ತು ಕಿಟ್ಟಿ ಕೋಣಗಳು ಗೆಲುವಿನ ನಗೆ ಬೀರಿದ್ರೆ, ಕರೆಯಲ್ಲಿ ಓಡಿದ ಕೋಣಗಳು ಜನರ ಮನಗೆದ್ದವು.
ಇಂದಿನ ಕಂಬಳಕ್ಕೆ ಸ್ಯಾಂಡಲ್ ವುಡ್, ಬಾಲಿವುಡ್ ತಾರೆಯರು ಸೇರಿದಂತೆ ಹಲವು ಗಣ್ಯರು ಕಂಬಳದ ಮೆರುಗನ್ನ ಮತ್ತಷ್ಟು ಹೆಚ್ಚಿಸಿದ್ರು. ರಕ್ಷಿತ್ ಶೆಟ್ಟಿ, ಉಪೇಂದ್ರ, ಪೂಜಾ ಹೆಗ್ಡೆ, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು ಕರಾವಳಿಯ ಕ್ರೀಡೆ ಕಂಡು ಪುಳಕಿತರಾದ್ರು. ಇದನ್ನೂ ಓದಿ: ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?
ಒಟ್ಟಿನಲ್ಲಿ ಕಂಬಳ ಕೂಟದಲ್ಲಿ ಭಾಗಿಯಾಗಿದ್ದ 178 ಜೋಡಿ ಎಲ್ಲಾ ಬಹುಮಾನ ಗೆಲ್ಲಲು ಸಾಧ್ಯವಾಗದೇ ಇದ್ರೂ ಬೆಂಗಳೂರು ಕಂಬಳದಲ್ಲಿ ನೋಡುಗರ ಮನಸ್ಸು ಗೆದ್ದಿದ್ದಂತೂ ನಿಜ. ಕಾಂತರ ಚಿತ್ರದಲ್ಲಿ ಸಿನಿಪ್ರಿಯರ ಮನಸ್ಸು ಗೆದ್ದಿದ್ದ ಕೋಣಗಳು ಜನರ ಮನಸು ಗೆಲ್ಲುವುದರ ಜೊತೆ ಜೊತೆಗೆ ಕರಾವಳಿಯ ವೈಭವವನ್ನ ಅನಾವರಣ ಮಾಡೋ ಮೂಲಕ ಚಿನ್ನದ ಪದಕವನ್ನ ಸಹ ಪಡೆದಕೊಂಡಿತ್ತು.
ಸಿಲಿಕಾನ್ ಸಿಟಿಯಲ್ಲಿ ಕಂಬಳದ ಕಂಪು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದು, ಕಂಬಳ ಜನಪದ ಕ್ರೀಡೆ ರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿ ಬೆಳೆಸುವ ಉದ್ದೇಶದಿಂದ ಕರಾವಳಿ ಭಾಗದಿಂದ ಸಿಲಿಕಾನ್ ಸಿಟಿಗೆ ಎಂಟ್ರಿಯಾಗಿದೆ. ಮುಂದೆ ರಾಜ್ಯದ ನಾನಾ ಭಾಗದಲ್ಲೂ ಕಂಬಳ ಆಯೋಜನೆ ಮಾಡೋ ಉದ್ದೇಶ ಕರಾವಳಿ ಬಾಗದ ಜನರಲ್ಲಿದೆ.