ಕಬಡ್ಡಿ ಕಿತ್ತಾಟ – ಕೋಚ್ ರಮೇಶ್ ವಿರುದ್ಧ ಆಟಗಾರ್ತಿ ಉಷಾರಾಣಿ ದೂರು

Public TV
2 Min Read
bc ramesh usharani

– ಕಾರ್ಯದರ್ಶಿ ರಮೇಶ್ ಸೇರಿ ನಾಲ್ವರಿಂದ ಹಲ್ಲೆ ಆರೋಪ
– ಪೊಲೀಸ್ ಪ್ರಭಾವ ಬಳಸಿ ದೂರು ನೀಡಿದ್ರಾ?

ಬೆಂಗಳೂರು: ರಾಜ್ಯ ಕಬಡ್ಡಿ ಅಸೋಸಿಯೇಷನ್ ನಲ್ಲಿನ ಕಿತ್ತಾಟ ಈಗ ಬೀದಿಗೆ ಬಂದಿದೆ. ರಾಷ್ಟ್ರೀಯ ಆಟಗಾರ್ತಿ ಮತ್ತು ಪೇದೆ ಆಗಿರುವ ಉಷಾರಾಣಿ ಅವರು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಬಿ.ಸಿ. ರಮೇಶ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಂಪಂಗಿರಾಮನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಿ.ಸಿ.ರಮೇಶ್ ಹಾಗೂ ಉಷಾರಾಣಿ ಪರಸ್ಪರ ಕಿತ್ತಾಡಿಕೊಂಡಿದ್ದು ಈಗ ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

ಮಂಗಳವಾರ ಸಂಜೆ ಕಂಠೀರವ ಸ್ಟೇಡಿಯಂನಲ್ಲಿ ಕಬಡ್ಡಿ ಅಸೋಸಿಯೇಷನ್ ಸಭೆ ಇತ್ತು. ಈ ವೇಳೆ ಅಸೋಷಿಯೇಷನ್ ಪ್ರಮುಖರೆಲ್ಲರು ಸೇರಿದ್ದಾಗ ಬಿ.ಸಿ ರಮೇಶ್ ಹಲ್ಲೆ ಮಾಡಿದ್ದಾರೆ ಎಂದು ಉಷಾರಾಣಿ ಆರೋಪಿಸಿದ್ದಾರೆ.

bc ramesh usharani 2

ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ್, ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಮುನಿರಾಜು, ತರಬೇತುದಾರ ನರಸಿಂಹ ಹಾಗೂ ಷಣ್ಮುಗಂ ವಿರುದ್ಧ ಉಷಾರಾಣಿ ದೂರು ನೀಡಿದ್ದಾರೆ. ಸೆಕ್ಷನ್ 354 ಬಿ ಅಡಿ ಪ್ರಕರಣ ದಾಖಲಿಸಿರುವ ಸಂಪಂಗಿರಾಮ ನಗರದ ಠಾಣೆಯ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಉಷಾರಾಣಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪೊಲೀಸ್ ಪ್ರಭಾವ ಬಳಸಿ ಕೋಚ್ ರಮೇಶ್ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾಳೆ. ಬಿ.ಸಿ. ರಾಮೇಶ್ ಜೊತೆಗೆ ಜಗಳ ತಗೆದು ಉಷಾರಾಣಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆಂದು ಬಿ.ಸಿ.ರಮೇಶ್ ಬೆಂಬಲಿಗ ಶ್ರೀನಿವಾಸ್ ಆರೋಪಿಸಿದ್ದಾರೆ.

ಸಂಪೂರ್ಣ ಘಟನೆಯ ಸಿಸಿಟಿವಿ ನಮ್ಮ ಬಳಿ ಇದ್ದು ಬಹಿರಂಗ ಪಡಿಸುತ್ತೇವೆ. ಮುಂದಿನ ದಿನಗಳಲ್ಲಿ ಕಬಡ್ಡಿ ಅಸೋಸಿಯೇಷನ್ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಬಿ.ಸಿ.ರಮೇಶ್ ಸ್ಪರ್ಧೆ ಮಾಡಬಾರದೆಂದು ಉಷಾರಾಣಿ ಈ ರೀತಿ ಅವಾಂತರ ಮಾಡಿದ್ದಾಳೆಂದು ಶ್ರೀನಿವಾಸ್ ಆರೋಪಿಸಿದ್ದಾರೆ.

bc ramesh

ಜಗಳಕ್ಕೆ ಕಾರಣ ಏನು?
ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಪಂದ್ಯಾಟಗಳಿಗೆ ತರಬೇತಿ ಶಿಬಿರ ನಡೆಯುತ್ತಿದ್ದು ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಟಗಾರ್ತಿಯರಿಗೆ ಶುಭಕೋರಲು ಶಿಬಿರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಆಗಿರುವ ಉಷಾರಾಣಿ ಅವರು ಅಧಿಕಾರಿಗೆ ಆಟಗಾರ್ತಿಯರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಈ ವಿಚಾರಕ್ಕೆ ಕೋಚ್ ಆಗಿರುವ ರಮೇಶ್ ಆಕ್ಷೇಪ ವ್ಯಕ್ತಪಡಿಸಿ, ನಾವು ಇರುವಾಗ ಅಧಿಕಾರಿಗೆ ಆಟಗಾರ್ತಿಯರನ್ನು ಪರಿಚಯಿಸಿದ್ದು ಸರಿಯಲ್ಲ ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೆ ಉಷಾರಾಣಿ ಅವರ ಜೊತೆಗಿನ ಮಾತುಕತೆ ಕರೆದಿದ್ದರು. ಈ ವೇಳೆ ಇಬ್ಬರ ಮಾತು ಜೋರಾಗಿ ಜಗಳ ವಿಕೋಪಕ್ಕೆ ತಿರುಗಿದೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *