ಬೆಂಗಳೂರು: ಗ್ರಹಣ ಬಂತು ಅಂದ್ರೆ ಸಾಕು ದೊಡ್ಡ ಗೌಡ್ರ ಕುಟುಂಬದಲ್ಲಿ ಆತಂಕ ಎದುರಾಗುತ್ತದೆ. ಯಾಕೆಂದರೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಗ್ರಹಣದ ಕರಿಛಾಯೆ ಬೀಳುತ್ತಲೇ ಇದೆ. ಜುಲೈ 2 ಸೂರ್ಯ ಗ್ರಹಣವಾಗಿದ್ದು, ಗೌಡ್ರ ಕುಟುಂಬ ಪೂಜೆಯಲ್ಲಿ ನಿರತವಾಗಿತ್ತು. ಆಗಲೇ ಗ್ರಹಣದಾಟ ಶುರುವಾಗಿತ್ತು. ಗಟ್ಟಿಯಾಗಿದ್ದ ಸರ್ಕಾರದ ಬುಡ ಇಬ್ಬರು ಶಾಸಕರ ರಾಜೀನಾಮೆಯಿಂದ ಅಲ್ಲಾಡತೊಡಗಿತ್ತು.
ಇನ್ನೇನು ಹೈಡ್ರಾಮದ ಮಧ್ಯೆ ಕುಮಾರಪರ್ವ ಅಂತ್ಯದ ಆರಂಭವಾಗಿದೆ. ಇದರ ಮಧ್ಯೆಯೇ ಸಿಎಂ ವಿಶ್ವಾಸಮತ ಯಾಚನೆಯ ಬಾಂಬ್ ಹಾಕಿದ್ದಾರೆ. ಆದರೂ ಎದೆಯೊಳಗೆ ಈಗ ಹೊಸ ಭಯ. ಅದುವೇ ಜುಲೈ 16ಕ್ಕೆ ಸಂಭವಿಸುವ ಚಂದ್ರ ಗ್ರಹಣ ಸರ್ಕಾರವನ್ನು ಮುಗಿಸಿಯೇ ಬಿಡುತ್ತೋ ಅನ್ನುವ ಭಯ ಕಾಡುತ್ತಿದೆ. ಈ ಗ್ರಹಣದ ಕರಿಛಾಯೆ ಗೌಡ್ರ ಕುಟುಂಬದಲ್ಲಿ ದೊಡ್ಡ ಭಯಕ್ಕೆ ಕಾರಣವಾಗಿದೆ. ಇದಕ್ಕಾಗಿಯೇ ಈಗ ಸರ್ಕಾರ ಉಳಿಸಲು ದೇವರ ಮೊರೆ ಹೋಗಿದ್ದಾರೆ.
ಒಂದೆಡೆ ಗ್ರಹಣ ಕಾಟ ಇನ್ನೊಂದಡೆ ಸರ್ಕಾರದ ಕೊನೆಯಾಟದ ತೂಗುಗತ್ತಿಯಲ್ಲಿರುವ ದಳಪತಿಗಳು ಈಗ ದೇವರ ಮೊರೆ ಹೋಗಿದ್ದಾರೆ. ಗ್ರಹಣ ದೋಷ ನಿವಾರಣೆಗೆ ಮುಂಬರುವ ಚಂದ್ರ ಗ್ರಹಣದ ಕರಿಛಾಯೆ ತಪ್ಪಿಸಲು ಈಗಾಗಲೇ ರೇವಣ್ಣ ಅವರು ತಿಮ್ಮಪ್ಪನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಒಂಬತ್ತು ತೆಂಗಿನ ಕಾಯಿಯನ್ನು ಪೂಜೆ ಮಾಡಿ ರೇವಣ್ಣ ಅವರು ತಮ್ಮ ಪದ್ಮನಾಭ ನಿವಾಸಕ್ಕೆ ಕಟ್ಟಿದ್ದಾರೆ. ಇನ್ನೊಂದ್ಕಡೆ ಸರ್ಕಾರ ಅತೃಪ್ತಿಯ ಉರಿಯಲ್ಲಿ ಬೇಯುತ್ತಿರುವಾಗ ಶಾರದಾಂಬೆ ಸನ್ನಿಧಾನದಲ್ಲೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.