ಬೆಂಗಳೂರು: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪದತ್ಯಾಗದ ಮಾತನಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಪಕ್ಷ ಕಟ್ಟುವ ಉತ್ಸಾಹದಲ್ಲಿ ನಿಖಿಲ್ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿದ್ದರು. ದೇವೇಗೌಡರ ಸೋಲಿನಿಂದ ಕಂಗೆಟ್ಟಿದ್ದ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಲು ಯುವ ಘಟಕದ ನೇತೃತ್ವ ವಹಿಸಿ ರಾಜ್ಯ ಸುತ್ತಿ ಪಕ್ಷ ಸಂಘಟಿಸುವುದಾಗಿ ತಿಳಿಸಿದ್ದರು. ಆದರೆ ಅಧಿಕಾರ ವಹಿಸಿಕೊಂಡು ಇಷ್ಟು ತಿಂಗಳಾದರೂ ನಿಖಿಲ್ ಕುಮಾರಸ್ವಾಮಿಯಿಂದ ಸಂಘಟನೆಯಾಗಲಿ, ಓಡಾಟವಾಗಲಿ ಕಂಡು ಬರಲೇ ಇಲ್ಲ.
ಇತ್ತೀಚೆಗೆ ತಮ್ಮ ಆಪ್ತರ ಬಳಿ ನನಗೆ ಯುವ ಘಟಕದ ನೇತೃತ್ವ ಬೇಡ. ಯಾರಾದರೂ ಆಸಕ್ತಿ ಇದ್ದವರು ಯುವ ಘಟಕವನ್ನು ಮುನ್ನಡೆಸಲಿ. ನನ್ನ ಕೈಯಲ್ಲಿ ಇದೆಲ್ಲ ಆಗಲ್ಲ. ನಾನು ಕಾರ್ಯಕರ್ತನಾಗಿಯೇ ಇರುತ್ತೇನೆ. ಈ ಬಗ್ಗೆ ಶೀಘ್ರವೇ ಅಪ್ಪನ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಉಪ ಚುನಾವಣೆ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯುವ ಸಮುದಾಯವನ್ನ ಒಗ್ಗೂಡಿಸಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರಿಗೆ ಕೂಡ ಇದರಿಂದ ಶಾಕ್ ಆಗಿದೆ.
ಉತ್ಸಾಹದಲ್ಲಿ ಬಂದು ಯುವ ಘಟಕದ ನೇತೃತ್ವ ವಹಿಸಿಕೊಂಡ ನಿಖಿಲ್ ಕುಮಾರಸ್ವಾಮಿ ಯುದ್ಧಕ್ಕೂ ಮುನ್ನವೇ ಶಸ್ತ್ರ ತ್ಯಾಗಕ್ಕೆ ಮುಂದಾಗಿರುವುದು ಜೆಡಿಎಸ್ ಪಾಳಯದಲ್ಲಿ ಮುಂದಿನ ಸಾರಥಿ ಯಾರು ಅನ್ನೋ ಆತಂಕ ಶುರುವಾಗಿದೆ.
ನಿಖಿಲ್ ನಿರ್ಧಾರಕ್ಕೆ ಕಾರಣಗಳು..?
ಮೈತ್ರಿ ಸರ್ಕಾರ ಪತನವಾಗಿದ್ದು ಹಾಗೂ ಜೆಡಿಎಸ್ ಪಕ್ಷದಲ್ಲಿನ ಒಳಜಗಳ, ನಾಯಕರ ಅಸಹಕಾರ, ಸಮನ್ವಯ ಕೊರತೆಯಿಂದ ನಿಖಿಲ್ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಜೆಡಿಎಸ್ ಮುಖಂಡರ ನಿರಂತರ ವಲಸೆ ಕೂಡ ಅವರಿಗೆ ಬೇಸರ ತರಿಸಿದೆ. ಮೈಸೂರು ಭಾಗದಲ್ಲಿಯೂ ಪಕ್ಷಕ್ಕೆ ಹಿನ್ನಡೆ ಆಗಿದೆ. ಇತ್ತ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ನಿರ್ಲಕ್ಷ್ಯ ಧೋರಣೆ ತೋರಿರುವುದು ನಿಖಿಲ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.