ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನದ ಬಳಿಕ ಜೆಡಿಎಸ್‍ಗೆ ಏಟಿನ ಮೇಲೆ ಏಟು ಬೀಳುತ್ತಾನೆ ಇವೆ. ಲೋಕಸಭೆ ಸೋಲು, ಸರ್ಕಾರದ ಪತನ, ಉಪ ಚುನಾವಣೆ ಸೋಲು, ಜೆಡಿಎಸ್‍ಗೆ ನಿಂಗಲಾರದ ತುತ್ತಾಗಿ ಪರಿಣಮಿಸಿದೆ. ಈಗ ಇದರ ಜೊತೆ ಹೊಸ ತಲೆನೋವು ಪ್ರಾರಂಭ ಆಗಿದೆ. ಜೆಡಿಎಸ್‍ನಲ್ಲಿ ಭವಿಷ್ಯದ ನಾಯಕನ ಚಿಂತೆ ಪ್ರಾರಂಭವಾಗಿದ್ದು ಪಕ್ಷದ ಕಾರ್ಯಕರ್ತರಿಗೆ ಗೊಂದಲ ಉಂಟು ಮಾಡಿದೆ.
ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ದೇವೇಗೌಡರು ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ನೆಪ ಮಾತ್ರಕ್ಕೆ ಪಕ್ಷದ ಚಟುವಟಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ. ಆದರೆ ಭವಿಷ್ಯದ ಜೆಡಿಎಸ್ ನಾಯಕರು ಅಂತ ಕರೆಸಿಕೊಳ್ಳುತ್ತಿರೋ ಯುವ ದಳಪತಿಗಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಮಾತ್ರ ಪಕ್ಷದ ಚಟುವಟಿಕೆಗಳಿಂದ ಸಂಪೂರ್ಣ ದೂರವಿದ್ದು, ಜೆಡಿಎಸ್ ಭವಿಷ್ಯ ಚಿಂತೆಗೀಡು ಮಾಡುವಂತೆ ಮಾಡಿದ್ದಾರೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಆಗಿರೋ ನಿಖಿಲ್ ಕುಮಾರಸ್ವಾಮಿ ನೆಪ ಮಾತ್ರಕ್ಕೆ ಅಧ್ಯಕ್ಷ ಸ್ಥಾನದಲ್ಲಿ ಇದ್ದಾರೆ. ಅಧಿಕಾರವಹಿಸಿಕೊಂಡಿದ್ದು ಬಿಟ್ಟರೆ ಇನ್ಯಾವುದೇ ಪಕ್ಷದ ಕೆಲಸ ಮಾಡ್ತಿಲ್ಲ. ಪಕ್ಷದ ಸಂಘಟನೆ ಸಭೆ ಮಾಡಿಲ್ಲ. ಜಿಲ್ಲಾ ಪ್ರವಾಸ ಮಾಡಿಲ್ಲ. ಒಂದೇ ಒಂದು ಪ್ರತಿಭಟನೆ ಸರ್ಕಾರದ ವಿರುದ್ಧ ಮಾಡಿಲ್ಲ. ಅಷ್ಟೇ ಯಾಕೆ ಪಕ್ಷದ ಕಚೇರಿ ಕಡೆಯೂ ಮುಖ ಹಾಕಿಲ್ಲ. ಹೀಗಾಗಿ ಯುವ ಘಟಕದ ಕೆಲಸಗಳು ಹಾಗೇ ಉಳಿದುಕೊಂಡಿವೆ. ನಾಯಕನಿಲ್ಲದೆ ಯುವ ಘಟಕವೂ ಸೊರಗಿ ಹೋಗಿದೆ.
ಮತ್ತೊಬ್ಬ ಯುವ ದಳಪತಿ ಪ್ರಜ್ಬಲ್ ರೇವಣ್ಣ. ಭವಿಷ್ಯದ ಜೆಡಿಎಸ್ ನಾಯಕ ಅಂತಾನೇ ಹೆಸರು ಕೇಳಿ ಬರುತ್ತಿವೆ. ಆದರೆ ಹಾಸನ ಸಂಸದರಾದ ಮೇಲೆ ಅದ್ಯಾಕೋ ಪ್ರಜ್ವಲ್ ಕೇವಲ ಹಾಸನಕ್ಕೆ ಸೀಮಿತ ಆಗಿ ಬಿಟ್ಟಿದ್ದಾರೆ. ಸಂಸದರಾದ ಬಳಿಕ ಪ್ರಜ್ಬಲ್ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪಕ್ಷ ಸಂಘಟನೆ ಮಾಡ್ತಾರೆ ಅಂತ ಎಲ್ಲರೂ ಭಾವಿಸಿದ್ರು. ಆದರೆ ಪ್ರಜ್ವಲ್ ಆ ಭರವಸೆ ಹುಸಿಗೊಳಿಸಿ ಸೈಲೆಂಟ್ ಆಗಿದ್ದಾರೆ. ಕಚೇರಿಗೆ ಬರೋದಿಲ್ಲ. ಕಾರ್ಯಕರ್ತರನ್ನ ಭೇಟಿ ಮಾಡಿಲ್ಲ. ಹೋರಾಟಗಳು ಇಲ್ಲ. ಹೀಗಾಗಿ ಪ್ರಜ್ಬಲ್ ಕೂಡಾ ಪಕ್ಷ ಸಂಘಟನೆಯಿಂದ ದೂರವೇ ಉಳಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.