ಬೆಂಗಳೂರು: ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರು ನನ್ನನ್ನು ಕರೆಯುತ್ತಾರೆ ಎಂದು ಕಾಯುತ್ತಿದ್ದೆ. ಆದರೆ ಅವರು ನನ್ನ ಕರೆದಿಲ್ಲ. ಹೀಗಾಗಿ ಅವರು ಕರೆದಲ್ಲಿಗೆ ನಾನು ಹೋಗುತ್ತೇನೆ ಎಂದು ಮಾಜಿ ಸಚಿವ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಗೌಡರ ಕುಟುಂಬಕ್ಕೆ ವಿಷವುಣಿಸಿದ ಕೀರ್ತಿ ಪುರುಷ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಾರಾ ಮಹೇಶ್, ಅವರು ಏನು ಹೇಳಿದ್ದಾರೋ ಅದೆಲ್ಲ ಸರಿಯಾಗಿಯೇ ಇದೆ. ಯಾಕೆಂದರೆ 2008ರಲ್ಲಿ ನನ್ನಿಂದಾಗಿ ನನ್ನ ಕ್ಷೇತ್ರದ ಜನ 20,848 ಮತಗಳ ಅಂತರದಿಂದ ಅವರನ್ನು ಸೋಲಿಸಿದರು. 10 ವರ್ಷ ಅಜ್ಞಾತ ವಾಸದಲ್ಲಿದ್ದಂತವರನ್ನು ಜೆಡಿಎಸ್ ಪಕ್ಷಕ್ಕೆ ಕರೆದುಕೊಂಡು ಬರಲು ಒಪ್ಪಿಕೊಂಡಿದ್ದೆ ಅಲ್ವ ಅದರ ಪಶ್ಚಾತ್ತಾಪ ಈಗ ಕಾಡುತ್ತಿದೆ ಎಂದರು.
Advertisement
Advertisement
ಅವರು 30 ವರ್ಷ ರಾಜಕಾರಣ ಮಾಡಿ ಇಂದು ಸುದ್ದಿಗೋಷ್ಠಿ ಮಾಡಲು ಪೊಲೀಸ್ ಭದ್ರತೆ ಕೇಳಿದ್ದಾರೆ. ಇದರಿಂದ ಅವರ ಸ್ಥಿತಿ ಏನು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಿ ಎಂದು ತಿಳಿಸಿದರು.
Advertisement
ಅವರು ನನ್ನನ್ನು ಕರೆದಿದ್ದರೆ ಇಂದು ನಾನು ಅವರ ಸುದ್ದಿಗೋಷ್ಠಿಗೆ ಹೋಗುತ್ತಿದ್ದೆ. ಆದರೆ ಅವರು ನನ್ನ ಕರೆದಿಲ್ಲ. ಅವರು ಕರೆಯಬಹುದೆಂಬ ನಿರೀಕ್ಷೆಯಿಂದ ನಾನು ಮೈಸೂರಿನಲ್ಲೇ ಇದ್ದೆ. ನಾನು ಅವರಿಗೆ ಏನು ಹೇಳಿದ್ದೀನಿ ಎಂಬುದರ ಕುರಿತು ಅವರೊಂದಿಗೆ ನಾಳೆ ಮಾತನಾಡುತ್ತೇನೆ. ಅವರು ಕರೆಯುವುದಕ್ಕೆ ನಾನು ಕಾಯುತ್ತಿದ್ದೇನೆ. ಅವರು ಎಲ್ಲಿ ಕರೆಯುತ್ತಾರೋ ಅಲ್ಲಿಗೆ ಹೋಗುತ್ತೇನೆ ಎಂದರು.
Advertisement
ಸಿದ್ದರಾಮಯ್ಯ ಇರುವಲ್ಲಿ ನನ್ನನ್ನು ಬರಬೇಡಿ ಎಂದು ಹೇಳಿದವರಲ್ಲಿ ನೀವೂ ಕೂಡ ಒಬ್ಬರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹೋಗ್ಲಿ ಬಿಡಿ ನಾನು ಅಷ್ಟು ಶಕ್ತಿವಂತ ನಾನು ಎಂಬುದನ್ನು ಒಪ್ಪಿಕೊಂಡಿದ್ದಾರಲ್ವ. ಈ ಮೂಲಕ ಕಾಂಗ್ರೆಸ್ ನಲ್ಲೂ ನಾನು ಪ್ರಭಾವಶಾಲಿ ಎಂದು ಹೇಳಿರುವುದಕ್ಕೆ ಖುಷಿ ಇದೆ ಅಂದರು. ಅವರೇನು ನಾನೇನು ಎಂಬುದು ನಮ್ಮ ಕ್ಷೇತ್ರದ ಜನರಿಗೆ ತಿಳಿದಿದೆ. ನನ್ನನ್ನು ನನ್ನ ಕ್ಷೇತ್ರದ ಜನ ಮೂರು ಸಾರಿ ಗೆಲ್ಲಿಸಿದ್ದಾರೆ. ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ ಎಂದರು.
ವಿಶ್ವನಾಥ್ ಹೇಳಿದ್ದೇನು?:
ನನ್ನನ್ನು ಸಿದ್ದರಾಮಯ್ಯ ಅವರಿಂದ ದೂರ ಮಾಡಿದ್ದೇ ಜೆಡಿಎಸ್. ಸಿದ್ದರಾಮಯ್ಯ ಇದ್ದಾರೆ ಸಮನ್ವಯ ಸಮಿತಿಗೆ ಬರಬೇಡಿ. ಸಿದ್ದರಾಮಯ್ಯ ಇದ್ದಾರೆ ದೋಸ್ತಿ ಸಭೆಗೆ ಬರಬೇಡಿ ಎಂದು ಹೇಳುತ್ತಾರೆ. ಯಾವ ಸಿದ್ದರಾಮಯ್ಯರಿಂದ ನಾನು ಕಾಂಗ್ರೆಸ್ ಬಿಡಬೇಕಾಯ್ತೋ, ಅದೆ ಸಿದ್ದರಾಮಯ್ಯರಿಂದ ಇಲ್ಲಿ ಕಿರುಕುಳ. ವಿಶ್ವನಾಥ್ ಬರಲಿ ಎಂದು ಹೇಳುವ ನೈತಿಕತೆ ನಿಮ್ಮಲ್ಲಿ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಎಂಜಿನಿಯರ್ ಆಗಿರುವ ನನ್ನ ಅಳಿಯನಿಗೆ ಏಯ್, ಅಮಾನತು ಮಾಡುತ್ತೇವೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ಆಗ ನಾನು ಅಮಾನತು ಮಾಡಿದ್ರೆ ಮಾಡಲಿ ಎಂದು ಆತನಿಗೆ ಸಮಾಧಾನ ಮಾಡಿದೆ. ಇದನ್ನೆಲ್ಲಾ ಗಮನಿಸಿದಾಗ ಈ ರಾಜಕಾರಣ ಎಲ್ಲಿಗೆ ಬಂದು ತಲುಪಿದೆ ಎಂಬ ಪ್ರಶ್ನೆ ಮೂಡುತ್ತದೆ. ಇಷ್ಟು ವರ್ಷ ರಾಜಕಾರಣ ಮಾಡಿದ ನನ್ನ ಕುಟುಂಬಕ್ಕೆ ಮುಖ್ಯಮಂತ್ರಿಗಳ ಕಚೇರಿಯಿಂದ ಬೆದರಿಕೆ ಹಾಕುತ್ತೀರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ನಿನ್ನೆ ಕೆಆರ್ ಪೇಟೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಆದರೆ ಇದೇ ಸಾರಾ ಮಹೇಶ್ ಅವರು ಈ ಹಿಂದೆ, ಕೆ.ಆರ್ ಪೇಟೆ, ಮಂಡ್ಯ ಜನ ನಮಗೆ ವಿಷವುಣಿಸಿದ್ದರು ಎಂದಿದ್ದರು. ಆದರೆ ಜನ ನಮಗೆ ವಿಷವುಣಿಸಿದ್ದಾರೆ ಎಂದು ನಿನ್ನೆ ಹೇಳಿದ್ದೀರಿ. ದೇವೇಗೌಡ ಕುಟುಂಬಕ್ಕೆ ವಿಷವುಣಿಸಿದ ಕೀರ್ತಿ ಪುರುಷ ಸಾರಾ ಮಹೇಶ್ ಹೊರತು ಇನ್ಯಾರೂ ಅಲ್ಲ. ಯಾವ ರಾಜಕಾರಣಿಗೂ ಕರ್ನಾಟಕ ರಾಜ್ಯದ ಜನತೆ ವಿಷವುಣಿಸಲ್ಲ ಎಂದು ಮಾಜಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದರು.
ಪಾಪ ಯಾರು ನಿಮ್ಮನ್ನು ಎತ್ತರಕ್ಕೆ ಬೆಳೆಸಿದ್ದಾರೋ, ಅವರನ್ನು ಕರೆದುಕೊಂಡು ತುಮಕೂರಿಗೆ ಹೋಗಿ ಖೆಡ್ಡಾಕ್ಕೆ ಹಾಕಿದ್ದೀರಿ. ಆ ಬಳಿಕ ಏನೇನು ಆಯ್ತು, ಯಾರು ಕಾರಣ ಇದಕ್ಕೆಲ್ಲ ಎಂದು ವಾಗ್ದಾಳಿ ನಡೆಸಿದರು.