ಬೆಂಗಳೂರು: ವಿಶ್ವಾಸ ಮತ ಯಾಚನೆಯಲ್ಲಿ ಹಿನ್ನಡೆ ಕಂಡು ದೋಸ್ತಿ ಸರ್ಕಾರ ಪತನವಾಗಿದ್ದು, ಆ ಬಳಿಕ ದಳಪತಿಗಳು ಡಲ್ ಆಗಿದ್ದಾರೆ.
ಹೌದು. ಬಿಜೆಪಿ ಸರ್ಕಾರ ರಚನೆಯಾದ ಬಳಿಕ ತಾತನ ಎದುರು ಅಪ್ಪ-ಮಕ್ಕಳು ಸ್ಲೋ ಡೌನ್ ಆಗಿದ್ದಾರೆ. ಹೀಗಾಗಿ ಸರ್ಕಾರ ಪತನವಾಗಿದ್ದಕ್ಕೆ ಜೆಡಿಎಸ್ ನವರು ಡಲ್ ಆದ್ರಾ ಎಂಬ ಪ್ರಶ್ನೆ ಎದ್ದಿದೆ. ಆದರೆ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರು ಮಾತ್ರ ತಮ್ಮ ಇಳಿವಯಸ್ಸಿನಲ್ಲಿಯೂ ಏಕಾಂಗಿಯಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ದೇವೇಗೌಡರ ಛಲ ಮಗ ಕುಮಾರಸ್ವಾಮಿ, ಮೊಮ್ಮಗ ನಿಖಿಲ್ ಗೆ ಇಲ್ಲವಾಯ್ತಾ ಅನ್ನೋ ಅನುಮಾನ ಮೂಡಿದೆ.
ಸರ್ಕಾರ ಹೋದ ಮೇಲೆ ಪಕ್ಷ ಸಂಘಟನೆಯಿಂದ ಎಚ್ ಡಿ ಕುಮಾರಸ್ವಾಮಿ ಅವರು ದೂರವೇ ಉಳಿದಿದ್ದಾರೆ. ಇತ್ತ ಮಗ ನಿಖಿಲ್ ಕೂಡ ಅಪ್ಪನ ಹಾದಿಯೇ ಹಿಡಿದಿದ್ದು, ಯುವ ಘಟಕದ ಅಧ್ಯಕ್ಷರಾಗಿಯೂ ಪಕ್ಷ ಸಂಘಟನೆಯಿಂದ ಮಾತ್ರ ದೂರ ಉಳಿದಿದ್ದಾರೆ.
ತಾತನಂತೆ ತಾನೂ ಪಕ್ಷ ಕಟ್ಟುತ್ತೇನೆ ಎಂದಿದ್ದ ನಿಖಿಲ್, ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡ ನಂತರ ಪಕ್ಷದಿಂದ ದೂರವೇ ಉಳಿದಿದ್ದಾರೆ. ಯುವ ಘಟಕದ ಅಧಿಕಾರ ಪಡೆದ ನಂತ್ರ ಪಕ್ಷದ ಕಚೇರಿಗೇ ನಿಖಿಲ್ ಬಂದಿಲ್ಲ. ಇದುವರೆಗೂ ಒಂದೇ ಒಂದು ಯುವ ಘಟಕದ ಸಭೆಯೂ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸರ್ಕಾರ ಹೋದ ಮೇಲೆ ಪಕ್ಷದ ಸಂಘಟನೆಗೆ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ನಿರಾಸಕ್ತಿ ತೋರಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ.