ಗಡಿಯಲ್ಲಿ ನಿಂತು ದೇಶ ಕಾಯೋ ಯೋಧನಿಗೆ ಅದೆಷ್ಟು ಧನ್ಯವಾದ ಹೇಳಿದ್ರು ಕಡಿಮೆಯೇ. ಅದೆಷ್ಟು ಮನದುಂಬಿ ಶ್ಲಾಘಿಸಿದರೂ ಅಲ್ಪವೇ. ಅವರ ತ್ಯಾಗದಿಂದ ಇಂದು ನಾವೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟು ಜೀವನ ಸಾಗಿಸುತ್ತಿದ್ದೇವೆ. ಅಂತಹ ವೀರಯೋಧನನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಇಂತಹದ್ದೊಂದು ಪರಿಕಲ್ಪನೆಯನ್ನಿಟ್ಟುಕೊಂಡು ಚಂದನವನದ ಪ್ರತಿಭಾನ್ವಿತ ಗಾಯಕ ಆದರ್ಶ್ ಅಯ್ಯಂಗಾರ್ ಸೈನಿಕರಿಗೆ ಹಾಡಿನ ಮೂಲಕ ಸಲಾಮ್ ಹೇಳಿದ್ದಾರೆ.
Advertisement
ಆದರ್ಶ್ ಅಯ್ಯಂಗಾರ್ ಕಂಠಸಿರಿಯಲ್ಲಿ ಮೂಡಿ ಬಂದ ‘ಜಯ ಹೇ’ ಹಾಡು ಬಿಡುಗಡೆಯಾಗಿ ಎಲ್ಲರ ಮನಸೂರೆ ಮಾಡಿದೆ. ದೇಶ ಕಾಯೋ ಸೈನಿಕನ ತ್ಯಾಗ ಬಲಿದಾನಕ್ಕೆ ಕೃತಜ್ಞತೆ ಹೇಳುವ ಪರಿಕಲ್ಪನೆ ಅಡಿಯಲ್ಲಿ ಈ ಹಾಡು ಮೂಡಿ ಬಂದಿದೆ. ಪ್ರಮೋದ್ ಮರವಂತೆ ಸಾಹಿತ್ಯ, ಹೇಮಂತ್ ಜೋಯಿಸ್ ಸಂಗೀತ ಸ್ಪರ್ಶವಿರುವ ಈ ಹಾಡಿಗೆ ರಕ್ಷಿತ್ ತೀರ್ಥಹಳ್ಳಿ ಒಂದೊಳ್ಳೆ ದೃಶ್ಯ ಕಾವ್ಯದ ನಿರ್ದೇಶನ ಮಾಡಿ ಇಡೀ ಹಾಡನ್ನು ಚೆಂದಗಾಣಿಸಿದ್ದಾರೆ. ರಾಕ್ ಪಾಪ್ ಮಾದರಿಯಲ್ಲಿ ಶ್ರೀಮಂತವಾಗಿ ಮೂಡಿ ಬಂದಿರುವ ಈ ಹಾಡಿಗೆ ಗಾಯಕ ಆದರ್ಶ್ ಅಯ್ಯಂಗಾರ್ ದನಿಯಾಗುವುದರ ಜೊತೆ ನಿರ್ಮಾಣ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಮಗಳ ಫೋಟೋ ಹಂಚಿಕೊಂಡು ಅಭಿಮಾನಿಗಳಿ ಶಾಕ್ ಕೊಟ್ಟ ಸತೀಶ್ ನಿನಾಸಂ
Advertisement
ಮಲೆನಾಡು ಭಾಗದಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆಯೂ ಹೆಚ್ಚು ಇರುವುದರಿಂದ ಈ ಹಾಡನ್ನು ಮಲೆನಾಡ ಪರಿಸರದಲ್ಲೇ ಚಿತ್ರೀಕರಿಸಲಾಗಿದೆ. ಸೈನ್ಯದಲ್ಲಿರುವ ತಂದೆಯನ್ನು ನೆನೆಯುವ ತಾಯಿ ಮಗಳು ಆತನ ಬರುವಿಕೆಗಾಗಿ ಎದುರು ನೋಡುತ್ತಿರುವ ಹಿನ್ನೆಲೆಯಲ್ಲಿ ಈ ಹಾಡನ್ನು ಸೆರೆ ಹಿಡಿಯಲಾಗಿದ್ದು, ಪೂಜಾ ಹರೀಶ್, ಸಾನ್ವಿ ಎಂ ಚಂದ್ರಶೇಖರ್ ತಾಯಿ ಮಗಳ ಪಾತ್ರವನ್ನು ನಿಭಾಯಿಸಿದ್ದಾರೆ.
Advertisement
Advertisement
ಗಾಯಕ ಆದರ್ಶ್ ಅಯ್ಯಂಗಾರ್ ಮೂಲತಃ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಸುವರ್ಣ ವಾಹಿನಿಯ ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಪ್ರಿಯತೆ ಗಳಸಿಕೊಂಡಿರುವ ಇವರು ಪ್ರಸ್ತುತ ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉದ್ಯೋಗದಲ್ಲಿದ್ದರೂ ಫ್ಯಾಶನ್ ಬಿಡದ ಆದರ್ಶ್ ಅಯ್ಯಂಗಾರ್ ಅಲ್ಲಿಯೇ ಸ್ಟುಡಿಯೋ ನಿರ್ಮಾಣ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಹಾಡನ್ನು ಕಂಪೋಸ್ ಮಾಡುತ್ತಾರೆ. ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೈ ಫ್ರೆಂಡ್ ಎಂಬ ಮೊದಲ ವೀಡಿಯೋ ಸಾಂಗ್ ಬಿಡುಗಡೆ ಮಾಡಿದ್ದ ಆದರ್ಶ್ ಇದೀಗ ‘ಜಯ ಹೇ’ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಹಾಡು ಗಾಯನದತ್ತ ಅವರಿಗಿರುವ ಪ್ಯಾಶನ್ ಎಷ್ಟರ ಮಟ್ಟಿನದು ಎಂಬುದನ್ನು ತೋರಿಸುತ್ತಿದೆ.