ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ: ಜಗ್ಗೇಶ್

Public TV
2 Min Read
jaggesh

– ನನ್ನ ತಾತನೇ ನನಗೆ ಮೊಮ್ಮಗನಾಗಿ ಹುಟ್ಟಿದ್ದಾನೆ

ಬೆಂಗಳೂರು: ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ. ಅದಕ್ಕೆ ನನ್ನ ತಾತನೇ ನನ್ನ ಮೊಮ್ಮಗನಾಗಿ ಹುಟ್ಟಿದ್ದಾನೆ ಎಂದು ನವರಸ ನಾಯಕ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.

ರಾಯರ ಭಕ್ತರಾದ ಜಗ್ಗೇಶ್ ಅವರು ಸದಾ ಆಧ್ಯಾತ್ಮದ ಬಗ್ಗೆ ಮಾತನಾಡುತ್ತಿರುತ್ತಾರೆ. ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸದಾ ಸಕ್ರಿಯವಾಗಿ ಇರುವ ಅವರು, ತಮ್ಮ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಅವರು ಟ್ವೀಟ್‍ಗಳಿಗೆ ಉತ್ತರ ನೀಡುತ್ತಾರೆ. ಕೆಲವೊಮ್ಮೆ ಟ್ವಿಟ್ಟರ್ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತಾರೆ, ಧೈರ್ಯ ತುಂಬುತ್ತಾರೆ.

ಈಗ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್ ಅವರು, ತಮ್ಮ ಮುದ್ದಿನ ಮೊಮ್ಮಗ ಜಗ್ಗೇಶ್ ಅವರ ಬೆನ್ನು ಏರಿ ಮಸಾಜ್ ಮಾಡುತ್ತಿರುವ ಕ್ಯೂಟ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಅಭಿಮಾನಿಯೋರ್ವ ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿ, ತಾತನಾಗಿ ಒಳ್ಳೆಯ ಅನುಭವ ಅಲ್ವೇ ಸರ್ ಎಂದು ಕಮೆಂಟ್ ಮಾಡಿದ್ದರು.

ಇದಕ್ಕೆ ಟ್ವಿಟ್ಟರ್ ಮೂಲಕವೇ ಉತ್ತರ ನೀಡಿರುವ ಜಗ್ಗೇಶ್, ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ. ನನ್ನ ತಾತನಿಗೆ ನಾನು ಹೀಗೆ ಬೆನ್ನ ಏರಿ ಮಸಾಜ್ ಮಾಡುತ್ತಿದ್ದೆ. ತಾತನಿಗೆ ಸ್ನಾನಕ್ಕೆ ನೀರು ಕಾಯಿಸುತ್ತಿದ್ದೆ. ಅವರ ಉಗುರು ಕತ್ತರಿಸುತ್ತಿದ್ದೆ. ವಾಕಿಂಗ್‍ಗೆ ಸಹಾಯ ಮಾಡುತ್ತಿದ್ದೆ. ಆಗ ಅವರು ನನಗೆ ಪ್ರೀತಿಯಿಂದ ಮುಂದೆ ನಿನ್ನ ಮೊಮ್ಮಗನಾಗಿ ಹುಟ್ಟಿ ಋಣ ತೀರಿಸುವೆ ಅನ್ನುತ್ತಿದ್ದರು ಎಂದು ತನ್ನ ತಾತನನ್ನು ನೆನೆದಿದ್ದಾರೆ.

ಇದರ ಜೊತೆ ತನ್ನ ಮುದ್ದಿನ ಮೊಮ್ಮಗನ ಬಗ್ಗೆಯೂ ಟ್ವೀಟ್ ಮಾಡಿರುವ ಜಗ್ಗೇಶ್, ನನ್ನ ಪುಟಾಣಿ ಅರ್ಜುನ ಮಾಸ್ಕ್ ಹಾಕಿ ಅಜ್ಜಿಗೆ ಕೊಟ್ಟ ಪೋಸ್ ಇದು. ನಾನು ಬೇಕಂತ ಮಾಸ್ಕ್ ಇಲ್ಲದಂತೆ ನಟಿಸಿದರೆ, ತಾತ ಮಾಸ್ಕ್ ಇಲ್ಲದಿದ್ದರೆ ನನ್ನ ಹತ್ತರ ಬರಬೇಡಿ. ಕೊರೊನಾ ಇದೆ ಬುದ್ಧಿ ಇಲ್ವಾ ಎಂದು ಕ್ಲಾಸ್ ತೆಗೆದುಕೊಂಡ. ಆಗ ನಾನು ಸ್ವಾರಿ ಮಗನೆ ತಪ್ಪಾಯ್ತು ಅಂದೆ, ಪರವಾಗಿಲ್ಲ ಹುಷಾರಾಗಿ ಇರು ಎಂದು ಬಿದ್ಧಿ ಹೇಳಿದ. ಬಹಳ ಚೂಟಿ ನನ್ನ ಮೊಮ್ಮಗ ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ದಿವಂಗತ ಕಾಶಿನಾಥ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಜಗ್ಗೇಶ್, ಉಪೇಂದ್ರ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿ, ನಿಮ್ಮ ಇವರ ಹಾಗೂ ಮನೋಹರ್ ಅವರ ಒಡನಾಟವನ್ನು ಹತ್ತಿರದಿಂದ ಕಂಡಿರುವೆ. ಅವರಂತೆ ನೀವು ನಟ ನಿರ್ದೇಶಕನಾಗಿ ಅವರ ಹೆಸರು ಉಳಿಸಿದ್ದೀರಿ. ನಮ್ಮ ನಿಮ್ಮ ಆ ದಿನಗಳು ಚಿತ್ರೀಕರಣದ ನಡುವೆ ವಿದ್ಯಾರ್ಥಿ ಭವನದ ದೋಸೆ. ನಾನು ಕಾಶಿನಾಥ್ ನಟಿಸಿದ ಮನ್ಮಥರಾಜ ಸಿನಿಮಾ ಮರೆಯಲಾಗದ ನೆನಪುಗಳು. ಕಾಶಿರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *