ಬೆಂಗಳೂರು: ತಾವು ಚಿಕ್ಕವರಾಗಿದ್ದಾಗ ಕೇವಲ 70 ಪೈಸೆ ಕೊಟ್ಟು ಅಣ್ಣಾವರ ಅಭಿನಯದ ಬಂಗಾರದ ಪಂಜರ ಸಿನಿಮಾ ನೋಡಿದ ಕಥೆಯನ್ನು ನವರಸ ನಾಯಕ ಜಗ್ಗೇಶ್ ಅವರು ನೆನಪಿಸಿಕೊಂಡಿದ್ದಾರೆ.
ಕೊರೊನಾ ಲಾಕ್‍ಡೌನ್ ನಡುವೆ ಮನೆಯಲ್ಲೇ ಉಳಿದಿರುವ ಜಗ್ಗೇಶ್ ಅವರು, ತಮ್ಮ ಪತ್ನಿ, ಮಕ್ಕಳು, ಮೊಮ್ಮಕ್ಕಳ ಜೊತೆ ಕಾಲಕಳೆಯುತ್ತಿದ್ದಾರೆ. ಜೊತೆಗೆ ಎಂದಿನಂತೆ ಅವರು ತಮ್ಮ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿ ಇದ್ದಾರೆ. ನಿನ್ನೇ ತಾನೇ ನನ್ನ ತಾತನೇ ನನ್ನ ಮೊಮ್ಮಗನಾಗಿ ಹುಟ್ಟಿದ್ದಾನೆ ಎಂದು ಟ್ವೀಟ್ ಮಾಡಿದ್ದರು. ಈಗ ತಮ್ಮ ತಾತ ಜೊತೆ ಸಿನಿಮಾ ನೋಡಿದ ಕಥೆಯೊಂದನ್ನು ಹೇಳಿಕೊಂಡಿದ್ದಾರೆ.
#ಬಂಗಾರದಪಂಜರ 1974 ಆಗ ನನಗೆ
11ವರ್ಷ!ತಾತ ಮಾಯಸಂದ್ರದಿಂದ ಬಂದು ನನಗೆ ಈಚಿತ್ರ ತೋರಿಸಿದ್ದ!
ಗೀತಾಂಜಲಿ ಚಿತ್ರಮಂದಿರ 70ಪೈಸಕ್ಕೆ ಮುಂದಿನ ಬೆಂಚು!
ಮೈಮರೆತು ಕೇಕೆಹಾಕಿ ಸಿನಿಮಾ ನೋಡುತ್ತಿದ್ದ ಕಾಲ!
ಇದೆಚಿತ್ರ ನಾನು ನಟನಾದಮೇಲೆ1995 ಕಥೆ ಸ್ವಲ್ಪಬದಲು ಮಾಡಿ #ಪಟ್ಟಣಕ್ಕೆಬಂದಪುಟ್ಟ ನಟಿಸಿ megahit
ಆಯಿತು!ಇಂದು ಈ ಚಿತ್ರದಿಂದ ಅಮರಹಳೆ ನೆನಪು! pic.twitter.com/HWc4pOvC5L
— ನವರಸನಾಯಕ ಜಗ್ಗೇಶ್ (@Jaggesh2) May 9, 2020
ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ಬಂಗಾರದ ಪಂಜರ 1974ರಲ್ಲಿ ತೆರೆಕಂಡಾಗ ನನಗೆ 11 ವರ್ಷ ವಯಸ್ಸು. ತಾತ ಮಾಯಸಂದ್ರದಿಂದ ಬಂದು ನನಗೆ ಈ ಚಿತ್ರ ತೋರಿಸಿದ್ದರು. ಗೀತಾಂಜಲಿ ಚಿತ್ರಮಂದಿರ 70ಪೈಸೆ ಕೊಟ್ಟು ಮುಂದಿನ ಬೆಂಚಿನಲ್ಲಿ ಕುಳಿತು ಮೈಮರೆತು ಕೇಕೆಹಾಕಿ ಸಿನಿಮಾ ನೋಡುತ್ತಿದ್ದ ಕಾಲ ಅದು. ಇದೇ ಚಿತ್ರವನ್ನು ನಾನು ನಟನಾದ ಮೇಲೆ 1995ರಲ್ಲಿ ಕಥೆ ಸ್ವಲ್ಪ ಬದಲು ಮಾಡಿ ಪಟ್ಟಣಕ್ಕೆ ಬಂದ ಪುಟ್ಟ ಸಿನಿಮಾ ಮಾಡಿ ನಾನು ಅದರಲ್ಲಿ ನಟಿಸಿದ್ದೆ. ಈ ಸಿನಿಮಾ ಮೆಗಾ ಹಿಟ್ ಆಯಿತು. ಇಂದು ಈ ಚಿತ್ರದಿಂದ ಅಮರ ಹಳೆ ನೆನಪು ಎಂದು ಬರೆದುಕೊಂಡಿದ್ದಾರೆ.
ಅಮರವಾಗಿ ಉಳಿದ ಅಣ್ಣಾವರ ನಟನೆ
1974ರಲ್ಲಿ ಬಿಡುಗಡೆಯಾದ ಬಂಗಾರ ಪಂಜರ ಸಿನಿಮಾದಲ್ಲಿ ಹಳ್ಳಿಯ ಕುರಿಕಾಯುವ ಯುವಕನ ಪಾತ್ರದಲ್ಲಿ ವರನಟ ಡಾ. ರಾಜ್‍ಕುಮಾರ್ ಅವರು ಮನೋಜ್ಞವಾಗಿ ನಟಿಸಿದ್ದರು. ಹಳ್ಳಿ ಮುಗ್ದ ಹುಡುಗ ಸಿಟಿಗೆ ಬಂದು ಅಲ್ಲಿಯ ಜೀವನ ಶೈಲಿಗೆ ಹೊಂದಿಕೊಳ್ಳು ಪರಿತಪಿಸುವ ಕಥೆಯೇ ಬಂಗಾರದ ಪಂಜರ. ವಿ ಸೋಮಶೇಖರ್ ನಿರ್ದೇಶದ ಈ ಚಿತ್ರ ಅಂದು ಸೂಪರ್ ಹಿಟ್ ಆಗಿತ್ತು. ರಾಜಣ್ಣನ ನಟನೆ ಅಮರವಾಗಿ ಉಳಿದಿತ್ತು.
ಈ ಸಿನಿಮಾವನ್ನು ಆಧಾರವಾಗಿ ಇಟ್ಟುಕೊಂಡೇ 1995ರಲ್ಲಿ ಪಟ್ಟಣಕ್ಕೆ ಬಂದ ಪುಟ್ಟ ಎಂಬ ಸಿನಿಮಾವನ್ನು ಮಾಡಲಾಗಿತ್ತು. ಈ ಸಿನಿಮಾದಲ್ಲಿ ಜಗ್ಗೇಶ್ ಅವರು ನಾಯಕ ನಟನಾಗಿ ನಟಿಸಿದ್ದರು. ಈ ಸಿನಿಮಾ ಕೂಡ ಬ್ಲಾಕ್ ಬಾಸ್ಟರ್ ಹಿಟ್ ಆಗಿ ಜಗ್ಗೇಶ್ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಒಬ್ಬ ಹಳ್ಳಿಯ ಯುವಕ ಪಟ್ಟಣಕ್ಕೆ ಬಂದು ಕಷ್ಟಪಡುವ ರೀತಿಯನ್ನು ಈ ಸಿನಿಮಾದಲ್ಲಿ ಎಳೆ ಎಳೆಯಾಗಿ ಕಾಮಿಡಿಯೊಂದಿಗೆ ತೋರಿಸಲಾಗಿತ್ತು.