ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಓರ್ವ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಮೂವರ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದೆ.
ಐಎಂಎ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ್ ಫಣೀಂದ್ರ ಅವರಿದ್ದ ಏಕಸದಸ್ಯ ಪೀಠವು, ಆರೋಪಿಗಳಾದ ನಿಜಾಮುದ್ದೀನ್, ಅಫ್ಸರ್ ಪಾಶಾ, ಮೊಹಮ್ಮದ್ ಹನೀಫ್ ಅಫ್ಸರ್ ಅಜೀಜ್‍ಗೆ ಜಾಮೀನು ನಿರಾಕರಿಸಿದೆ. ಪ್ರಕರಣದ ಮತ್ತೊರ್ವ ಆರೋಪಿ ಸೈಯ್ಯದ್ ಮುಜಾಹಿದ್‍ಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
Advertisement
Advertisement
ಮತ್ತೊಂದು ಕಡೆ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮಾಲೀಕತ್ವದ ಐಎಂಎ ಸಂಸ್ಥೆಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು, ರಾಜ್ಯ ಸರ್ಕಾರ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದೆ-2004 (ಕೆಪಿಐಡಿ) ಅನುಸಾರ ಸಕ್ಷಮ ಪ್ರಾಧಿಕಾರ ನೇಮಕ ಮಾಡಿತ್ತು. ಸರ್ಕಾರದ ಈ ಆದೇಶ ರದ್ದು ಮಾಡುವಂತೆ ಕೋರಿ ಐಎಂಎ ಕಂಪನಿ ಮನ್ಸೂರ್ ಖಾನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದ ಕೋರ್ಟ್, ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.
Advertisement
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿಬಿಐನಿಂದ ಮೌಲ್ವಿ ಅಫ್ಸರ್ ಹನೀಜ್ ಸೇರಿ ಇಬ್ಬರ ಮೇಲೆ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಆರ್.ಟಿ.ನಗರ ಮೂಲದ ಮೌಲ್ವಿ ಅಫ್ಸರ್ ಹನೀಜ್ ಮನ್ಸೂರ್ ಖಾನ್‍ನಿಂದ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಪಡೆದುಕೊಂಡಿದ್ದ. ಬಂಗಲೆ ಪಡೆದಿದ್ದರಿಂದ ತನ್ನ ಸಮುದಾಯದವರಿಗೆ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದ. ಮಸೀದಿಯಲ್ಲಿ ಪ್ರಾರ್ಥನೆಗೆ ಬಂದ ವೇಳೆ ಪ್ರೇರೇಪಣೆ ನೀಡಿ ಹೂಡಿಕೆ ಮಾಡುವಂತೆ ಸೂಚನೆ ನೀಡುತ್ತಿದ್ದ. ಈ ಹಿನ್ನೆಲೆ ಸೆಪ್ಟೆಂಬರ್ ನಲ್ಲಿ ಎಸ್‍ಐಟಿ ಅಧಿಕಾರಿಗಳು ಮೌಲ್ವಿಯನ್ನು ಬಂಧಿಸಿದ್ದರು.
Advertisement
ಹನೀಫ್ ಅಫ್ಸರ್ ಅಜೀಜ್ ಶಿವಾಜಿನಗರ ಒಪಿಎಚ್ ರಸ್ತೆಯ ಬೇಪಾರಿಯನ್ ಮಸೀದಿಯ ಧರ್ಮ ಗುರುವಾಗಿದ್ದು, 2017ರಲ್ಲಿ ಹೆಚ್‍ಬಿಆರ್ ಲೇಔಟ್ ನಲ್ಲಿ ಮೂರು ಕೋಟಿ ರೂ. ಮೌಲ್ಯದ ಮನೆ ಉಡುಗೊರೆ ಪಡೆದಿದ್ದ.
ಮಸೀದಿಗೆ ಬರುವ ಸಾವಿರಾರು ಭಕ್ತರ ಭಾವನೆಗಳ ಜೊತೆ ಆಟವಾಡಿದ್ದ ಹನೀಫ್ ಅಫ್ಸರ್ ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಐಎಂಎ ನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದ. ನಮಾಜ್‍ಗೆ ಬಂದ ಜನರಿಗೆ ಐಎಂಎನಲ್ಲಿ ಹಣ ಹೂಡುವಂತೆ ಪ್ರಚೋದನೆ ಮಾಡುತ್ತಿದ್ದ. ಈ ಧರ್ಮಗುರು ಮಾತನ್ನು ನಂಬಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಐಎಂಎನಲ್ಲಿ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿಸಿದ್ದರಿಂದ ಧರ್ಮಗುರುವಿನ ಋಣ ತೀರಿಸಲು ಮೂರು ಕೋಟಿ ರೂ. ಮೌಲ್ಯದ ಮನೆಯನ್ನು ಮನ್ಸೂರ್ ಖಾನ್ ನೀಡಿದ್ದ.