Bengaluru City
ಐಎಂಎ ಜ್ಯುವೆಲ್ಲರಿ ಹಗರಣದ ಹಿಂದೆ ಅಡಗಿದೆ ಕಾಂಗ್ರೆಸ್ ನಾಯಕರ ಪ್ರತಿಷ್ಠೆ

ಬೆಂಗಳೂರು: ಐಎಂಎ ಜ್ಯುವೆಲ್ಲರಿ ಹಗರಣದಲ್ಲಿ ತೆರೆಮರೆಯ ಪಾತ್ರಧಾರಿಗಳಾದ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ರೋಶನ್ ಬೇಗ್ ನಡುವಿನ ಮುಸ್ಲಿಂ ನಾಯಕತ್ವದ ಜಟಾಪಟಿ ಹಗರಣವು ಬಯಲಾಗುವಂತೆ ಮಾಡಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ತಮಗೆ ಕೈ ತಪ್ಪಿದ್ದ ಸಚಿವ ಸ್ಥಾನ ಜಮೀರ್ ಅಹಮ್ಮದ್ ಅವರ ಪಾಲಾಗಿದ್ದು ರೋಶನ್ ಬೇಗ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ತಾವೇ ಮುಸ್ಲಿಂ ಸಮುದಾಯದ ನಾಯಕ ಎಂಬ ನಾಯಕತ್ವದ ಜಟಾಪಟಿ ಇಬ್ಬರ ನಡುವಿನ ಅಸಮಾಧಾನ ಬೇರೆ ಬೇರೆ ರೂಪ ಪಡೆಯುವಂತೆ ಮಾಡಿದೆ.
ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ರೋಶನ್ ಬೇಗ್ ಕಾಂಗ್ರೆಸ್ ನಲ್ಲಿ ಯಾರಿಗೂ ಬೇಡವಾಗಿದ್ದರು. ಇದನ್ನೇ ಸೂಕ್ತ ಸಮಯ ಎಂದು ಭಾವಿಸಿದ ಸಚಿವ ಜಮೀರ್ ಐಎಂಎ ಹಗರಣದ ರೂವಾರಿ ಮನ್ಸೂರ್ ಆಡಿಯೋ ಬಿಡುಗಡೆ ಮಾಡಿಸಿದರು ಅನ್ನೋದು ರೋಶನ್ ಬೇಗ್ ಬೆಂಬಲಿಗರ ಆರೋಪವಾಗಿದೆ.
ತಮ್ಮ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ ಜಮೀರ್ ವಿರುದ್ಧ ರೋಶನ್ ಬೇಗ್ ಜಮೀರ್ ಹಾಗೂ ಐಎಂಎ ಮಾಲೀಕನ ನಡುವಿನ 5 ಕೋಟಿ ಹಣಕಾಸು ವ್ಯವಹಾರದ ದಾಖಲೆ ಬಿಡುಗಡೆ ಮಾಡಿಸಿದರು ಎನ್ನಲಾಗುತ್ತಿದೆ. ಹಾಗೆ ನೋಡಿದರೆ ರೋಶನ್ ಬೇಗ್ ಹಾಗೂ ಜಮೀರ್ ಇಬ್ಬರು ಕೂಡ ಐಎಂಎ ಮಾಲೀಕ ಮನ್ಸೂರ್ ಗೆ ಆತ್ಮೀಯರಾಗಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಹಗರಣದ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಸಮುದಾಯದ ನಾಯಕತ್ವಕ್ಕಾಗಿ ನಡೆದ ಪೈಪೋಟಿ ಕುರಿತು ಪರಸ್ಪರ ಒಬ್ಬರನ್ನೊಬ್ಬರ ಬಗ್ಗೆ ಮಾತನಾಡಿಕೊಳ್ಳಲು ಹೋಗಿ ಸಮುದಾಯದ ಮುಂದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಮೂಲಕ ನಾಯಕರ ಪ್ರತಿಷ್ಠೆ, ಒಳ ಜಗಳದಿಂದ ದೊಡ್ಡ ಹಗರಣವೊಂದು ಬಯಲಾಗುವಂತೆ ಮಾಡಿದೆ.
