ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಮಿತ್ರಮಂಡಳಿ ಸಚಿವರು ಸೈಲೆಂಟಾಗಿದ್ದಾರೆ. ಆದರೆ ಸೋತವರ ಅಸಮಾಧಾನ ಹಾಗೆಯೇ ಮುಂದುವರಿದಿದೆ. ಮಾಜಿ ಸಚಿವ ಎಚ್. ವಿಶ್ವನಾಥ್, ಅನರ್ಹ ಶಾಸಕ ಆರ್. ಶಂಕರ್ ಮತ್ತು ಮಾಜಿ ಸಚಿವ ಎಂಟಿಬಿ ನಾಗರಾಜ್ ತಮ್ಮ ಬೇಗುದಿ ಮುಂದುವರಿಸಿದ್ದಾರೆ. ಆಗಾಗ ಸಿಎಂ ಯಡಿಯೂರಪ್ಪ ಭೇಟಿ ಮಾಡುವ ಮೂಲಕ ಸಚಿವ ಸ್ಥಾನಕ್ಕೆ ಈ ಮೂವರೂ ಒತ್ತಡ ತಂತ್ರ ಮುಂದುವರಿಸಿದ್ದಾರೆ.
Advertisement
ಇಂದೂ ಸಹ ಎಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಅವರು ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ರಾಜಕೀಯ ವಿಚಾರ ಚರ್ಚೆ ಮಾಡಿದರು. ಎಚ್. ವಿಶ್ವನಾಥ್ ಸಚಿವ ಸ್ಥಾನದ ಪಟ್ಟು ಮುಂದುವರಿಸಿದ್ದು, ಸಿಎಂ ಬಳಿ ಇಂದು ಸಹ ಈ ಸಂಬಂಧ ಚರ್ಚೆ ನಡೆಸಿದರು ಎನ್ನಲಾಗಿದೆ.
Advertisement
ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಎಚ್. ವಿಶ್ವನಾಥ್, ನಾನು ಸಿಎಂ ಬಳಿ ಮಂತ್ರಿ ವಿಚಾರ ಆಗಲಿ, ರಾಜಕೀಯ ವಿಚಾರ ಆಗಲಿ ಚರ್ಚೆ ಮಾಡಲ್ಲ. ಮಂತ್ರಿ ಸ್ಥಾನ ಯಾವಾಗ ಬರುತ್ತೆ, ಅದಾಗಿಯೇ ಬರುತ್ತೆ. ಸಚಿವ ಸ್ಥಾನ ಕೊಡಿ ಅಂತ ನಾನು ಪದೇ ಪದೇ ಕೇಳಲ್ಲ. ನನಗೆ ಸಚಿವ ಸ್ಥಾನ ಕೊಡಲೇಬೇಕು, ಕೊಟ್ಟೆ ಕೊಡ್ತಾರೆ ಎಂದು ಗುಡುಗಿದರು.
Advertisement
Advertisement
ಸಚಿವ ಸ್ಥಾನ ಕೊಟ್ರೆ ಕೆಲಸ ಮಾಡ್ತೀನಿ. ಆದರೆ ನಾನು ಸಚಿವ ಸ್ಥಾನಕ್ಕಾಗಿ ಯಾವತ್ತೂ ಅಂಗಲಾಚಿಲ್ಲ. ನಾನು ಈ ಹಿಂದೆ ಸಚಿವನಾಗಿದ್ದಾಗ ಕೊಟ್ಟ ಕಾರ್ಯಕ್ರಮಗಳು ಇನ್ನೂ ಚಾಲ್ತಿಯಲ್ಲಿವೆ ಅಂತ ಇದೇ ವೇಳೆ ವಿಶ್ವನಾಥ್ ಹೇಳಿದರು. ನಂದಗಢದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡುವಂತೆ ಕೇಳಲು ಬಂದಿದ್ವಿ. ಹಣ ಬಿಡುಗಡೆಗೆ ಸಿಎಂ ಒಪ್ಪಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಅನರ್ಹ ಶಾಸಕ ಆರ್. ಶಂಕರ್ ಸಹ ವಿಶ್ವನಾಥ್ ಜೊತೆಗೇ ಸಿಎಂ ಭೇಟಿ ಮಾಡಿದರು. ಮಾಧ್ಯಮಗಳ ಜೊತೆ ಮಾತಾಡಿದ ಆರ್. ಶಂಕರ್, ನನಗೂ ಸಚಿವ ಸ್ಥಾನ ಸಿಗುವ ಭರವಸೆಯಿದೆ. ಮುಂದೆ ಎಂಎಲ್‍ಸಿ ಮಾಡಿ ಸಚಿವ ಸ್ಥಾನ ಕೊಡಲಿದ್ದಾರೆ ಎಂದರು.