ಬೆಂಗಳೂರು: ಹೊಸಕೆರೆಹಳ್ಳಿಯ ಕೆರೆ ಕಟ್ಟೆ ಒಡೆದು ಸಂಭವಿಸಿದ ಅನಾಹುತದ ಬೆನ್ನಲ್ಲೇ, ಇದೀಗ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಕೆರೆಯ ನೀರು ಮನೆಗಳಿಗೆ ನುಗ್ಗಿರುವ ಪರಿಣಾಮ ಸಾವಿರಾರು ಮನೆಗಳು ನೀರಿನಲ್ಲಿ ಜಲಾವೃತವಾಗಿದ್ದು, ಜನ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ಹೌದು. ಮಳೆಯಿಂದ ತುಂಬಿದ್ದ ಹುಳಿಮಾವು ಕೆರೆಯನ್ನ ಒಡೆದವರು ಯಾರು ಅನ್ನೋ ಚರ್ಚೆ ಇದೀಗ ಶುರುವಾಗಿದೆ. ಪಾಲಿಕೆಯ ಮೇಯರ್ ಏನೋ ಸ್ಥಳೀಯ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ ಅಂತಿದ್ದಾರೆ. ಆದರೆ ಕೆರೆ ಒಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಲಮಂಡಳಿಯ ಅಸಿಸ್ಟೆಂಟ್ ಎಂಜಿನಿಯರ್ ಕಾರ್ತಿಕ್ ರನ್ನ ಹುಳಿಮಾವು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳೀಯ ವ್ಯಕ್ತಿಯಿಂದ ಈ ಅವಾಂತರ ಆಗಿದ್ದರೆ ಕಾರ್ತಿಕ್ ರನ್ನ ಯಾಕೆ ವಶಕ್ಕೆ ಪಡೆಯುತ್ತಿದ್ದರು. ಸದ್ಯ ಈ ದುರಂತಕ್ಕೆ ಜಲಮಂಡಳಿ, ಪಾಲಿಕೆ, ಹಾಗೂ ಬಿಡಿಎ ನೇ ಹೊಣೆ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿದೆ.
Advertisement
Advertisement
ಬಿಡಿಎ ಅಧೀನದಲ್ಲಿದ್ದ ಈ ಕೆರೆಯನ್ನ 2016ರಲ್ಲಿ ರಾಜ್ಯ ಸರ್ಕಾರ, ಬಿಬಿಎಂಪಿಗೆ ಹಸ್ತಾಂತರಿಸಿತ್ತು. ಆದರೆ ಬಿಡಿಎ ಕೆರೆ ಒತ್ತುವರಿ, ಜಲಾನಯ ಪ್ರದೇಶ, ಸರಹದ್ದು ಸರ್ವೆ ಮಾಡಿ ಪಾಲಿಕೆಗೆ ಹಸ್ತಾಂತರ ಮಾಡಬೇಕಿತ್ತು. ಇದುವರೆಗೂ ಆ ಕೆಲಸ ಆಗಿರಲಿಲ್ಲ. ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಅಂತ ಬಿಡಿಎ, ನೀರನ್ನು ಹೊರ ತೆಗೆಯಲು ಯತ್ನಿಸಿದಾಗ ಈ ಅವಾಂತರ ಆಗಿದೆ. ಆದರೆ ಇದನ್ನ ಪಾಲಿಕೆ ಅಲ್ಲಗೆಳೆಯುತ್ತಿದೆ. ಮತ್ತೊಂದೆಡೆ ಇದೇ ಕೆರೆಯ ಮೇಲ್ಭಾಗದಲ್ಲಿ ಜಲಮಂಡಳಿಯಿಂದ ಎಸ್ ಟಿಪಿ ಪ್ಲಾಂಟ್ ಕೆಲಸ ನಡೆಯುತ್ತಿತ್ತು. ಹೀಗಾಗಿ ಜಲಮಂಡಳಿಯವ್ರ ನಿರ್ಲಕ್ಷ್ಯದಿಂದಲೂ ಈ ದುರಂತ ಆಗಿದೆ ಅಂತ ಸ್ಥಳೀಯರು ದೂರಿದ್ದಾರೆ.
Advertisement
Advertisement
ಬಿಬಿಎಂಪಿ, ಬಿಡಿಎಯ ಕೆಲಸದಿಂದ ಇಂದು ಸಾವಿರಾರು ಜನ ಮನೆ ತೊರೆದು ಬೀದಿಗೆ ಬಂದಿದ್ದಾರೆ. ತಮ್ಮದಲ್ಲದ ತಪ್ಪಿಗೆ ನಿರಾಶ್ರಿತರ ಕೇಂದ್ರದಲ್ಲಿ ಮಕ್ಕಳನ್ನ ಕಟ್ಟಿಕೊಂಡು ವಾಸ್ತವ್ಯ ಮಾಡುತ್ತಿದ್ದಾರೆ. ಕಣ್ಣಿರಿನ ಮೂಲಕ ತಮ್ಮ ನೋವಿನ ಸಂಕಟವನ್ನ ಹೊರ ಹಾಕುತ್ತಿದ್ದಾರೆ. ಆರೇಳು ಲೇಔಟ್ ಗಳಲ್ಲಿ ನೀರು ತುಂಬಿ ಪರಸ್ಥಿತಿ ಬಿಗಡಾಯಿಸಿದೆ. ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥಗೊಂಡಿದೆ. ಸಿಎಂ ಬಿಎಸ್ ಯಡಿಯೂರಪ್ಪನವರ ಸೂಚನೆ ಮೇರೆಗೆ, ಸೋಮವಾರ ಘಟನಾ ಸ್ಥಳಕ್ಕೆ ಸಚಿವ ಆರ್. ಅಶೋಕ್, ವಿ. ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ಕೂಡ ಭೇಟಿ ನೀಡಿ, ಪರಿಶೀಲಿಸಿದರು. ಈ ದುರಂತದಲ್ಲಿ ತಪ್ಪಿತಸ್ಥರು ಯಾರೇ ಇರಲಿ ಕ್ರಮಕೈಗೊಳ್ಳೋ ಕೆಲಸ ಮಾಡುತ್ತೇವೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
ಹುಳಿಮಾವು ಕೆರೆ ಅಭಿವೃದ್ಧಿಗೆ ಪಾಲಿಕೆ ಆರು ಕೋಟಿ ರೂಪಾಯಿಯನ್ನ ತನ್ನ ಬಜೆಟ್ ನಲ್ಲಿ ಮೀಸಲಿಟ್ಟಿತ್ತು. ಪಾಲಿಕೆ ಇದೇ ಅನುದಾನದಲ್ಲಿಯೇ ಕೆರೆಯನ್ನ ಸ್ವಚ್ಛಗೊಳಿಸುವ ವೇಳೆ ಈ ದುರಂತ ಆಯ್ತಾ ಅಥವಾ ಬಿಡಿಎನ ಅವೈಜ್ಞಾನಿಕ ನಿರ್ಧಾರದಿಂದ ಆಯ್ತಾ ಎಂಬ ಪ್ರಶ್ನೆ ಮೂಡಿದೆ. ಇದೆರೆಡು ಹೊರತುಪಡಿಸಿ, ಜಲಮಂಡಳಿಯಿಂದ ನಡೆಯುತ್ತಿದ್ದ ಕೆಲಸದಿಂದ ಈ ದುರಂತ ನಡೀತಾ ಅನ್ನೋದು ಪೊಲೀಸ್ ತನಿಖೆಯಿಂದಲೇ ತಿಳಿದುಬರಬೇಕಿದೆ.