– ಹಾವ್ ರಾಣಿ ಹೇಳ್ತಾಳಂತೆ ಮಹಾಭವಿಷ್ಯ
– ಮಾಟಗಾತಿಯ ಮೋಸಕ್ಕೆ ಮದ್ವೆಯೇ ಸ್ಟಾಪ್!
ಬೆಂಗಳೂರು: ದೇವಲೋಕದಿಂದ ಭೂ ಲೋಕಕ್ಕೆ ದೇವರೆ ಕಳಿಸಿದ ಹಾವು. ಈ ದೇವರ ಹಾವು ಮಾತನಾಡುತ್ತದೆ, ಭವಿಷ್ಯ ಹೇಳುತ್ತದೆ. ಅಷ್ಟೇ ಅಲ್ಲದೆ ಥಟ್ ಅಂತ ಕಷ್ಟ ಪರಿಹರಿಸುತ್ತದೆ. ದೇವರ ಹಾವಿಗಾಗಿ ಇಡೀ ಖಾಕಿ ಪಡೆ ಹುಡುಕಾಡುತ್ತಿದೆ. ಆದರೆ ಈ ಭವಿಷ್ಯ ಹೇಳುವ ದೇವರ ಹಾವನ್ನು ಪಬ್ಲಿಕ್ ಟಿವಿ ಲೈವ್ ಚೇಸ್ ಮಾಡಿದೆ.
ಹಸ್ತಸಾಮುದ್ರಿಕೆ, ರೇಖಿ ಭವಿಷ್ಯ, ಮುಖ ಭವಿಷ್ಯ, ಜಾತಕ ಭವಿಷ್ಯ. ಹೀಗೆ ನಾನಾ ತರದ ರೀತಿಯಲ್ಲಿ ಭವಿಷ್ಯ ಹೇಳುವವರನ್ನು ನೋಡಿರುತ್ತೀರಿ. ಆದರೆ ಹೆಚ್‍ಬಿಆರ್ ಲೇಔಟ್‍ನ ಶಬನಮ್ ದೇವರ ಹಾವಿನ ಮೂಲಕ ಭವಿಷ್ಯ ಹೇಳುತ್ತಿದ್ದಾಳೆ. ಈ ದೇವರ ಹಾವನ್ನು ಪಬ್ಲಿಕ್ ಟಿವಿ ಜಾಲಾಡಿ ಹುಡುಕಲು ಪ್ರಯತ್ನಿಸಿದೆ. ದೇವರ ಹಾವನ್ನು ಲೈವ್ ಚೇಸ್ ಮಾಡಿದೆ.
ಹೆಚ್‍ಬಿಆರ್ ಲೇಔಟ್‍ನ ಶಬನಮ್ ಸೊಂಟ ಬಳುಕಿಸಿ ರ‍್ಯಾಂಪ್‌ವಾಕ್ ಮಾಡುವಾಗ ಅದ್ಯಾರು ಆಕೆಗೆ ಈ ಐಡಿಯಾ ಕೊಟ್ರೋ ಏನೋ? ನನ್ ಬಳಿ ಹಾವಿದೆ, ಭವಿಷ್ಯ ಹೇಳುತ್ತದೆ ಅಂತಾ ಸ್ಯಾಂಪಲ್ ಬುಟ್ಲು. ಅಷ್ಟೇ ಹಿಂದೂ ಮುಸ್ಲಿಂ ಎನ್ನದೇ ನೂರಾರು ಕುಟುಂಬ ಈಕೆಯ ಬೆನ್ನುಬಿದ್ದು ಕಷ್ಟ ಪರಿಹಾರವಾಗುವ ಕನಸು ಕಂಡರು. ಆದರೆ ಇದೂವರೆಗೆ ಯಾರೋಬ್ಬರೂ ದೇವರ ಹಾವನ್ನು ನೋಡಿದವರಿಲ್ಲ. ಎಲ್ಲರನ್ನೂ ಬಾಗಿಲಲ್ಲೇ ನಿಲ್ಲಿಸುತ್ತಿದ್ದಳು.
ಶಬನಮ್ ಮೊದಮೊದಲು ಮುಸ್ಲಿಮರನ್ನೇ ಟಾರ್ಗೆಟ್ ಮಾಡಿಕೊಂಡು ತನ್ನ ಮನೆಯಲ್ಲಿಯೇ ಆಧ್ಯಾತ್ಮಿಕ ಕೇಂದ್ರವನ್ನು ಶುರು ಮಾಡಿಕೊಂಡಳು. ಇದು ದೇವರ ನೀರು ಅಂತ ಜನರಿಗೆ ಕುಡಿಸಿ, ಅವರನ್ನು ಆಧ್ಯಾತ್ಮಿಕತೆಗೆ ತಳ್ಳುತ್ತಿದ್ದಳು. ಅಷ್ಟೇ ಅಲ್ಲದೆ ನಿನ್ನ ಗಂಡನ ಜೀವಕ್ಕೆ ಕಂಟಕವಿದೆ. ಅವರನ್ನ ಉಳಿಸಿಕೊಳ್ಳಬೇಕಾದರೆ 5 ಲಕ್ಷ ರೂ. ಕೊಡಬೇಕು, 10 ಹತ್ತು ಲಕ್ಷ ರೂ. ಕೊಡಬೇಕು. ಹಜರತ್ ಜೊತೆ ಮಾತನಾಡಬೇಕು ಎಂದು ಜನರನ್ನು ಹೆದರಿಸುತ್ತಿದ್ದಳು. ದೇವರ ಹಾವು ಭವಿಷ್ಯ ಹೇಳಿದೆ, ನಾನು ನಾಗಿಣಿ ಅಂತ ಜನರಿಂದ ದುಡ್ಡು ಪೀಕತೊಡಗಿದ್ದಳು.
ಕೇವಲ ಕೆಲವೇ ತಿಂಗಳಲ್ಲಿ, ಭರ್ತಿ ದುಡ್ಡು, ಚಿನ್ನ ಮಾಡಿಕೊಂಡ ಶಬನಮ್ ರಾತ್ರೋರಾತ್ರಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಅತ್ತ ಲಕ್ಷ ಲಕ್ಷ ದುಡ್ಡು ಕಳೆದುಕೊಂಡ ಜನರು ಇನ್ನಷ್ಟು ಕಷ್ಟವನ್ನು ಮೈಮೇಲೆ ಎಳೆದುಕೊಂಡ ಜನ ಕಂಗಾಲಾಗಿದ್ದಾರೆ.
ಸಂಬಂಧಿಕರನ್ನೂ ಬಿಡದ ಹಾಬ್ ರಾಣಿ:
ಶಬನಮ್, ತನ್ನ ಸ್ವಂತ ಸಂಬಂಧಿಕರಿಗೆ ಚಳ್ಳೆ ಹಣ್ಣು ತಿನ್ನಿಸಿ 70 ಲಕ್ಷ ರೂಪಾಯಿಯನ್ನ ತೆಗೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಶಬನಮ್ ಮನೆಯಲ್ಲಿ ನಾಗರತ್ನಮ್ಮ ಎಂಬ ವೃದ್ಧೆ, 8 ವರ್ಷದಿಂದ ಮನೆಗೆಲಸ ಮಾಡುತ್ತಿದ್ದರು. ಅವರನ್ನೂ ನಂಬಿಸಿ 8 ಲಕ್ಷ ರೂ. ಪೀಕಿದ್ದಾಳೆ. ಈ ಹಣವನ್ನು ನಾಗರತ್ನಮ್ಮ ತನ್ನ ಮಗಳ ಮದ್ವೆಗೆ ಅಂತ ತೆಗೆದಿಟ್ಟಿದ್ದರು. ಆದರೆ ಶಬನಮ್ ಕೆಲಸದಿಂದ ನಾಗರತ್ನಮ್ಮನ ಮಗಳ ಮದುವೆ ನಿಂತು ಹೋಗಿದೆ.
ಶಬನಮ್ ಅದ್ಯಾವ ಪರಿ ಮೋಸ ಮಾಡಿದ್ದಾಳೆ ಅಂದ್ರೆ ಭರ್ತಿ ನಾಲ್ಕು ಸ್ಟೇಷನ್‍ನಲ್ಲಿ ಆಕೆಯ ವಿರುದ್ಧ ನೂರಾರು ದೂರು ದಾಖಲಾಗಿವೆ. ವಿವೇಕನಗರ, ಕೆ.ಜಿ ಹಳ್ಳಿ, ಪುಲಿಕೇಶಿ ನಗರ, ಭಾರತಿನಗರ ಪೊಲೀಸರು ನಾಗಿಣಿ ಹಿಂದೆ ಬಿದ್ರೂ ಪತ್ತೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಒಂದೆರಡು ಬಾರಿ ಈಕೆಯನ್ನು ಹಿಡಿದು ತಂದರೂ ಅದೆಂಗೋ ರಿಲೀಸ್ ಆದ ಶಬನಮ್ ಯಾರ ಕೈಗೂ ಸಿಗದಂತೆ ಮಾಯವಾಗಿದ್ದಾಳೆ.