ಬೆಂಗಳೂರು: ಬೆಳ್ಳಂಬೆಳಗ್ಗೆ ಬೈಕ್ ಸವಾರನ ಮೇಲೆ ಸ್ಕೂಲ್ ಬಸ್ ಹರಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಸಮ್ಮೇತನಹಳ್ಳಿ ಬಳಿ ನಡೆದಿದೆ.
ಮೃತಪಟ್ಟ ಬೈಕ್ ಸವಾರನನ್ನು ಹೊರರಾಜ್ಯದ ತಾನೀಸ್ ಎಂದು ಗುರುತಿಸಲಾಗಿದೆ. ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಮತ್ತೊಬ್ಬ ಮೀನ್ಸು ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೊಸಕೋಟೆಯ ಎಸ್ ಬುಟ್ಟಳ್ಳಿ ಕಾಲೇಜು ರಸ್ತೆಯಲ್ಲಿರುವ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಸೇರಿದ ಬಸ್, ಬೈಕ್ ಮೇಲೆ ಹರಿದ ಪರಿಣಾಮ ಈ ಘಟನೆ ಸಂಭವಿಸಿದೆ. ಇದೇ ಸ್ಥಳದಲ್ಲಿ ಇದುವರೆಗೂ 20 -25 ಅಪಘಾತಗಳು ಆಗಿವೆ. ಆದರೆ ಈ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.