ಬೆಂಗಳೂರು: ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಯೋಧರ ಮೇಲೆ ಹೂ ಚೆಲ್ಲಿ ಹೊಸಕೋಟೆ ತಾಲೂಕಿನ ನಂದಗುಡಿಯ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.
ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಿದ್ದು, ಒಟ್ಟು ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಲ್ಲಿ ಹೈವೋಲ್ಟೆಜ್ ಕಣವಾಗಿದೆ. ಆದ್ದರಿಂದ ಶಾಂತಿಯುತ ಚುನಾವಣೆ ಭದ್ರತೆಯನ್ನು ಕಾಪಾಡಲು ಬಂದ ಭಾರತೀಯ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ನಂದಗುಡಿ ಗ್ರಾಮಸ್ಥರು ಹೂ ಚೆಲ್ಲಿ ಸ್ವಾಗತ ಮಾಡಿಕೊಂಡಿದ್ದಾರೆ.
ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ಕಣ ರಂಗೇರಿದ್ದು, ಅಭ್ಯರ್ಥಿಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕೆಲಸ ಆರಂಭಿಸಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂದು ಚುನಾವಣಾ ಭದ್ರತೆಗಾಗಿ ಬಂದ ಸೈನಿಕರನ್ನು ಅಲ್ಲಿ ಗ್ರಾಮಸ್ಥರು ಸೈನಿಕರ ಮೇಲೆ ಹೂವು ಚೆಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈನಿಕರು ಮತ್ತು ಪೊಲೀಸರಿಗೆ ಮೆರವಣಿಗೆ ಮಾಡಿ ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ.
ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ ನಿಂದ ಶಾಸಕ ಭೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಸುರೇಶ್ ಅವರು ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಸ್ಪರ್ಧಿಸುತ್ತಿದ್ದಾರೆ.