Bengaluru City
ಕಾರು ಗುದ್ದಿದ ರಭಸಕ್ಕೆ ಬೆಂಗ್ಳೂರು ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ರು!

ಬೆಂಗಳೂರು: ಕಾರು ಗುದ್ದಿದ್ದ ರಭಸಕ್ಕೆ ಬೈಕ್ ಸವಾರರಿಬ್ಬರು ಫ್ಲೈಓವರ್ ಮೇಲಿನಿಂದ ಕೆಳಗಿನ ರಸ್ತೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ತಮಿಳುನಾಡು ಮೂಲದ ಮೊಹಮದ್ ಹುಸೈನ್(37) ಫಕ್ರುದ್ದಿನ್(34) ಎಂದು ಗುರುತಿಸಲಾಗಿದೆ. ಬೆಂಗಳೂರಿನ ನೀಲಸಂದ್ರದಲ್ಲಿ ವಾಸವಾಗಿದ್ದ ಇವರು ಕಾರ್ಯ ನಿಮಿತ್ತ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.
ಕೆಳಭಾಗದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎಂದು ಬೆಂಗಳೂರು-ಹೊಸೂರು ರಸ್ತೆಯ ಎಲಿವೆಟೆಡ್ ಫ್ಲೈಓವರ್ ಮೇಲೆ ಹೋಗುತ್ತಿದ್ದಾಗ ಗಾರೆಭಾವಿ ಪಾಳ್ಯ ಸಮೀಪದಲ್ಲಿ ಹಿಂದಿನಿಂದ ಅತಿ ವೇಗವಾಗಿ ಬಂದ ಉಬರ್ ಕಂಪನಿಯ ಮಾರುತಿ ರಿಟ್ಜ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರು ಗಾಳಿಯಲ್ಲಿ ತೇಲಿಕೊಂಡು ಕೆಳಗಿನ ರಸ್ತೆಗೆ ಬಿದ್ದಿದ್ದಾರೆ. ಈ ದೃಶ್ಯ ಹತ್ತಿರದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅಪಘಾತಕ್ಕೆ ಸಾಕ್ಷಿಯಾಗಿದೆ.
ಸ್ಥಳದಲ್ಲಿ ಮೊಹಮದ್ ಹುಸೈನ್ ಸಾವನ್ನಪ್ಪಿದ್ದರೆ ಫಕ್ರುದ್ದಿನ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವಿಗಿಡಾಗಿದ್ದಾರೆ. ಕಾರು ಚಾಲಕ ಅಪಘಾತದ ನಂತರ ಪರಾರಿಯಾಗಿದ್ದಾನೆ. ಈ ಸಂಬಂಧ ಮಡಿವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರು ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
https://youtu.be/qeItjehTEWE
