ಬೆಂಗಳೂರು: ಹೊಂಗಸಂದ್ರದ ಕಂಟೈನ್‍ಮೆಂಟ್ ಝೋನ್‍ಗೆ ಇಂದು ಡಿಎಚ್‍ಒ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಅವರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಎಲ್ಲಾ ಮುನ್ನೆಚ್ಚರಿಕೆ ವಹಿಸುವಂತೆ ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ.
ಹೊಂಗಸಂದ್ರ ಈಗ ಹಾಟ್ ಸ್ಪಾಟ್ ಆಗಿರುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಫಿವರ್ ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಫಿವರ್ ಕ್ಲಿನಿಕ್‍ಗೆ ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ವೈದ್ಯಕೀಯ ಸಿಬ್ಬಂದಿ ಅಗತ್ಯ ಔಷಧಿ ನೀಡಿ ಕಳುಹಿಸುತ್ತಿದ್ದಾರೆ.
ಇಲ್ಲಿ ಮೊದಲ ಬಾರಿಗೆ ಪಾಸಿಟಿವ್ ಕಾಣಿಸಿದ ಬಿಹಾರ ಮೂಲದ ಕಾರ್ಮಿಕ ಆರೋಗ್ಯ ಇಲಾಖೆಗೆ ಭಾರೀ ಸವಾಲಾಗಿದ್ದು ಆತನ ಸಂಪರ್ಕವನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಬಿಹಾರಿ ಕಾರ್ಮಿಕನ ಮನೆಯ ಸುತ್ತಮುತ್ತ ವಾಸವಿದ್ದ ಏರಿಯಾದವರಿಗೆಲ್ಲಾ ಗಂಟಲು ದ್ರವ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಸಾಮಾನ್ಯವಾಗಿ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊರತುಪಡಿಸಿ, ಸೀಲ್ಡ್ ಡೌನ್ ಆಗಿದ್ದ ಭಾಗದಲ್ಲಿ ಯಾರಿಗಾದ್ರೂ ಗುಣ ಲಕ್ಷಣಗಳು ಕಂಡುಬಂದರಷ್ಟೇ ಟೆಸ್ಟ್ ನಡೆಸುತ್ತಿದ್ರು. ಆದರೆ ಬಿಹಾರಿ ಕಾರ್ಮಿಕ ಪಾಸಿಟಿವ್ ಬಂದ ಬೆನ್ನಲ್ಲೇ ಈತನ ಕಾಂಟಾಕ್ಟ್ ನಲ್ಲಿರುವವರಿಗೂ ಪಾಸಿಟಿವ್ ಬಂದಿದೆ. ಹೀಗಾಗಿ ಅಲರ್ಟ್ ಆದ ಆರೋಗ್ಯ ಇಲಾಖೆ ಅತ್ಯಧಿಕ ಸಂಖ್ಯೆಯಲ್ಲಿ ಹೊಂಗಸಂದ್ರ ಭಾಗದಿಂದ ಸ್ಯಾಂಪಲ್ ಕಲೆಕ್ಟ್ ಮಾಡಲು ನಿರ್ಧರಿಸಿದೆ.
ಹೊಂಗಸಂದ್ರದಲ್ಲಿ ಆತಂಕದ ವಾತಾವರಣವಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು ಕಂಪ್ಲೀಟ್ ಬಂದ್ ಆಗಿವೆ. ಹೊಂಗಸಂದ್ರದಲ್ಲಿ ನಿರಂತರ ಪಾಸಿಟಿವ್ ಪ್ರಕರಣ ಏರಿಕೆಯಾದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ರಕ್ಷಣಾ ಕವಚ ನೀಡಲಾಗಿದೆ. ಕಸ ಎತ್ತುವ ಮೊದಲು ಕಸಕ್ಕೆ ರಾಸಾಯನಿಕ ಸಿಂಪಡಣೆ ಮಾಡಿ ನಂತರ ಕಸದ ಗಾಡಿಗಳಿಗೆ ಹಾಕುತ್ತಿದ್ದಾರೆ.
ಹೊಂಗಸಂದ್ರದ ವಿದ್ಯಾಜ್ಯೋತಿ ನಗರ ಸುತ್ತಮುತ್ತ ಬಿಬಿಎಂಪಿ ವತಿಯಿಂದ ಔಷಧಿ ಸಿಂಪಡಣೆ ಕಾರ್ಯವೂ ಇಂದು ನಡೆದಿದೆ.