ಬೆಂಗಳೂರು: ಸರ್ಕಾರಕ್ಕೆ ಮತ್ತು ವಿಪಕ್ಷಗಳಿಗೆ ಹನಿಟ್ರ್ಯಾಪ್ ತನಿಖೆ ಬೇಡವಾದ ಕಾರಣ ಸಿಸಿಬಿ ಈ ತನಿಖೆಯನ್ನು ನಿಲ್ಲಿಸಿದೆ. ಇಬ್ಬರಿಗೂ ಬೇಡವಾದ ತನಿಖೆ ನಮಗ್ಯಾಕೆ ಬೇಕು ಅಂತಾ ಪೊಲೀಸರು ಕೈ ಚೆಲ್ಲಿದ್ದಾರೆ.
ಹನಿಟ್ರ್ಯಾಪ್ ಹಗರಣ ಬಯಲಿಗೆ ಬಂದಾಗ ಐದಾರು ಮಂದಿ ಶಾಸಕರು ‘ಹನಿ’ ಬಲೆಯೊಳಗೆ ಸಿಲುಕಿರುವ ಬಗ್ಗೆ ಮಾಹಿತಿಯಿತ್ತು. ಎಲ್ಲಿ ತನಿಖೆಗೆ ಸಹಕರಿಸಿದರೆ ಹೆಸರು ಬಯಲಾಗಿ ಮಾನ ಮರ್ಯಾದೆ ಹೋಗುತ್ತದೋ ಎನ್ನುವ ಭಯದಿಂದ ಯಾವ ಶಾಸಕರು ಈಗ ತನಿಖೆ ನಡೆಸಿ ಅಂತಾ ಮುಂದೆ ಬರುತ್ತಿಲ್ಲ.
ನಮ್ಮನ್ನು ಬಿಟ್ಟರೆ ಸಾಕು, ನಮ್ಮ ಹೆಸರು ಬಾರದೇ ಇರುವ ರೀತಿ ನೋಡಿಕೊಳ್ಳಿ ಎಂದು ಗೃಹ ಸಚಿವರ ಮೂಲಕ ಪೊಲೀಸರ ಮೇಲೆ ಒತ್ತಡ ಹಾಕುವ ಕೆಲಸ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಕೇವಲ ಒಬ್ಬ ಶಾಸಕರ ದೂರಿಗೆ ಮಾತ್ರ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಹಾಕಲು ತಯಾರಿ ನಡೆಸಿದ್ದಾರೆ.
ಒಬ್ಬ ಶಾಸಕರು ದೂರು ಕೊಟ್ಟು ಮಾನ ಕಳೆದುಕೊಳ್ಳುವಂತ ಪರಿಸ್ಥಿತಿ ಉದ್ಭವ ಮಾಡಿಕೊಂಡರು ಎನ್ನುವ ಮಾತುಗಳು ಕೇಳಿಬರತೊಡಗಿದೆ. ಆ ಶಾಸಕನ ಮಾನ ಹರಾಜಾಗಿರುವುದೇ ಸಾಕು. ನಮಗೆ ಯಾವ ತನಿಖೆಯೂ ಬೇಡ. ನಮ್ಮ ಹೆಸರು ಬರುವುದು ಬೇಡ ಎಂದು ನೋಡಿಕೊಳ್ಳುವಲ್ಲಿ ಕೆಲ ಹನಿ ಶಾಸಕರು ಯಶಸ್ವಿಯಾಗಿದ್ದಾರೆ.