ಬೆಂಗಳೂರು: ಗುರುವಾರ ನಡೆದ ಸಿಎಂ ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು, ಆದರೆ ಆರೋಗ್ಯ ಸಮಸ್ಯೆಯಿಂದ ನಾನು ಹೋಗಲು ಸಾಧ್ಯವಾಗಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಹೇಳಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ನನಗೂ ಯಡಿಯೂರಪ್ಪ ಅವರ ಕಾರ್ಯಕ್ರಮಕ್ಕೆ ಹೋಗಲು ಆಸೆ ಇತ್ತು. ನನಗೂ ಆಹ್ವಾನ ನೀಡಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದ ಹೋಗಲು ಆಗಿಲ್ಲ. ಹಾಗಾಗಿ ನಾನು ಅವರಿಗೆ ಪತ್ರ ಬರೆದು ಶುಭಾಶಯ ಕೋರಿದ್ದೇನೆ ಎಂದು ತಿಳಿಸಿದರು.
Advertisement
Advertisement
ಗುರುವಾರ ಕಾವೇರಿ ನಿವಾಸಕ್ಕೆ ಹೋಗಬೇಕು ಅಂತ ಅಂದುಕೊಂಡೆ. ಆದರೆ ಜನರು ಜಾಸ್ತಿ ಇರುತ್ತಾರೆ ಅಂತ ಹೋಗಲು ಆಗಿಲ್ಲ. ಹಾಗಾಗಿ ಅವರಿಗೆ ಪತ್ರ ಬರೆದು ನೂರು ಕಾಲ ಸುಖವಾಗಿರಿ ಎಂದು ಹಾರೈಸಿದ್ದೇನೆ. ನಿನ್ನೆ ಸಿದ್ದರಾಮಯ್ಯ ಮಾತಿಗೆ ಭಾವನಾತ್ಮಕವಾಗಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ಗಟ್ಟಿಗಾರ ಎಂದು ಹೇಳುತ್ತಿದ್ದರು. ಮೊದಲ ಬಾರಿಗೆ ಸಿದ್ದರಾಮಯ್ಯ ಮಾತು ಕೇಳಿ ಬಿಎಸ್‍ವೈ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುವುದನ್ನು ನಾನು ಟಿವಿಯಲ್ಲಿ ನೋಡಿದ್ದೇನೆ ಎಂದರು.
Advertisement
Advertisement
ಇದೇ ವೇಳೆ ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಕೂಗಿದ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ವಿಚಾರವಾಗಿ ಮಾತನಾಡಿದ ದೇವೇಗೌಡರು, ಅಮೂಲ್ಯ ಆ ಕಾರ್ಯಕ್ರಮಕ್ಕೆ ಬರುವುದು ನನಗೆ ಗೊತ್ತಿರಲಿಲ್ಲ. ಓವೈಸಿ ಬರುವುದು ಮಾತ್ರ ನನಗೆ ಹೇಳಿದ್ದರು. ನಮ್ಮ ಮನೆಗೆ ಹಿರಿಯ ಮುಸ್ಲಿಂ ನಾಯಕರು ಬಂದಿದ್ದರು. ಇಮ್ರಾನ್ ಪಾಷಾ ಕೂಡಾ ಬಂದಿದ್ದರು. ನೀವು ಕಾರ್ಯಕ್ರಮಕ್ಕೆ ಬರಬೇಕು ಎಂದು ಒತ್ತಾಯ ಮಾಡಿದ್ದರು. ಆದರೆ ನಾನು ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದೆ ಎಂದು ಹೆಚ್‍ಡಿಡಿ ಹೇಳಿದರು.
ಆರೋಗ್ಯ ಸರಿಯಿಲ್ಲದ ಕಾರಣ ನಾನು ಅವತ್ತಿನ ಸಭೆಗೆ ಹೋಗಿರಲಿಲ್ಲ. ನಾನು ಬರುತ್ತೇನೆ ಎಂದು ಫ್ಲೆಕ್ಸ್ ನಲ್ಲಿ ಫೋಟೋ ಹಾಕಿದ್ದಾರೆ. 3-4 ಸಭೆಯಲ್ಲಿ ಅಮೂಲ್ಯ ಭಾಷಣ ಮಾಡಿದ್ದಳು. ಹಾಸನದಲ್ಲಿಯೂ ಒಂದು ಕಾರ್ಯಕ್ರಮದಲ್ಲಿ ಆಕೆ ಭಾಷಣ ಮಾಡಿದ್ದಳು. ಅಲ್ಲಿ ಆ ರೀತಿ ಏನು ಮಾತಾಡಿಲ್ಲ. ಇಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ಕೇಳಿದ್ದೇನೆ. ಪೊಲೀಸ್ ತನಿಖೆ ನಡೆಯುತ್ತಿದೆ ನೋಡೋಣ ಎಂದು ತಿಳಿಸಿದರು.