– ಯಾಕೆ ಮಾತಾಡ್ತಾರೋ ಗೊತ್ತಿಲ್ಲ
– ಪಾಪ ಸಿಎಂ ಮುಖ ನೋಡೊಕೆ ಆಗ್ತಾ ಇಲ್ಲ
ಬೆಂಗಳೂರು: ಸಿಎಂ ಆರೋಗ್ಯವನ್ನು ಬಿಜೆಪಿಯ ಸಿ.ಟಿ.ರವಿ ರಿಪೇರಿ ಮಾಡುತ್ತಾರಾ? ಅವರೇನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಡಾಕ್ಟರಾ? ಯಾಕೆ ಈ ರೀತಿ ಎಲ್ಲಾ ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ.
ಸಿಎಂ ಹತಾಶರಾಗಿ ವರ್ತನೆ ಮಾಡುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಗ್ರಾಮ ವಾಸ್ತವ್ಯ ಸಹಿಸುವುದಕ್ಕೆ ಆಗದೆ, ಯಾವುದೋ ಒಂದು ಶಕ್ತಿ ಮೂಲಕ ಅಡಚಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ತಲುಪುವುದಕ್ಕೂ ಮುನ್ನವೇ ತಡೆದು ನಮ್ಮ ಕೆಲಸ ಈಗಲೇ ಮಾಡಿಕೊಡಿ ಎನ್ನುವುದು ಎಷ್ಟು ಸರಿ? ಅದು ಹೇಗೆ ಸಾಧ್ಯ? ಇದಕ್ಕೆ ಯಾರದ್ದೋ ಪ್ರೇರಣೆ ಇದೆ ಎಂದರು. ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ
Advertisement
Advertisement
ನನಗೆ ಯಾಕೆ ಹೀಗೆ ಮಾಡುತ್ತೀರಾ? ಲಾಠಿ ಚಾರ್ಜ್ ಮಾಡಿಸಬೇಕಾ ಎಂದು ಸಿಎಂ ಪಾಪ ಪೇಚಾಡುತ್ತಿದ್ದಾರೆ. ಪ್ರತಿಭಟನೆಯನ್ನು ತಡೆದು ತಡೆದು ಪೊಲೀಸರಿಗೂ ಸಾಕಾಗಿದೆ. ಅವರಿಗೂ ತಾಳ್ಮೆ ಇರುತ್ತದೆ. ಈ ಪ್ರತಿಭಟನೆಯಿಂದ ಮುಖ್ಯಮಂತ್ರಿಗಳು ಒದ್ದಾಡುತ್ತಿದ್ದಾರೆ. ಸಿಎಂ ವಿನೂತನ ಗ್ರಾಮ ವಾಸ್ತವ್ಯ ಮಾಡುವುದಕ್ಕೆ ಹೊರಟಿದ್ದಾರೆ. ಆದರೆ ಇದನ್ನು ಸಹಿಸದ ಯಾವುದೋ ಒಂದು ಶಕ್ತಿ ಅದಕ್ಕೆ ಅಡಚಣೆ ಮಾಡಲು ಮುಂದಾಗುತ್ತಿದೆ ಎಂದು ಕಿಡಿಕಾರಿದರು.
Advertisement
ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿಯವರ ಷಡ್ಯಂತ್ರವಿದೆ. ಪಾಪ ಮುಖ್ಯಮಂತ್ರಿಗಳ ಮುಖ ನೋಡುವುದಕ್ಕೆ ಆಗುತ್ತಿಲ್ಲ. ಅವರು ಜನರ ಸಮಸ್ಯೆ ಪರಿಹಾರ ಮಾಡುವುದಕ್ಕೆ ಹೋಗುತ್ತಿದ್ದಾರೆ. ಆದರೆ ದಾರಿ ಮಧ್ಯೆ ಹೀಗೆ ಪ್ರತಿಭಟನೆ ಮಾಡಿದರೆ ಸಿಎಂ ಏನು ಮಾಡಬೇಕು ಎಂದು ಪ್ರಶ್ನಿಸಿದರು.
Advertisement
ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎರಡ್ಮೂರು ದಿನಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ನಮ್ಮ ಪಕ್ಷದಲ್ಲಿ ಆರು ಜನ ಪರಿಶಿಷ್ಟರು ಗೆದ್ದಿದ್ದಾರೆ. ನಮ್ಮನ್ನ ಏನೂ ಮಾಡಿಲ್ಲ ಎನ್ನುವ ಅಸಮಾಧಾನ ಅವರಲ್ಲಿದೆ. ಅದು ನನಗೆ ಗೊತ್ತಾಗುತ್ತದೆ. ಹೀಗಾಗಿ ಪರಿಶಿಷ್ಟರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಚಿಂತಿಸಿದ್ದೇನೆ. ಮಧು ಬಂಗಾರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದಾರೆ. ಅವರಿಗೆ ಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಇದೆ. ಎಲ್ಲರನ್ನೂ ಕರೆದು ಸಭೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳುವ ಮೂಲಕ ಪರಿಶಿಷ್ಟರಿಗೆ ಸಚಿವ ಸ್ಥಾನದ ಸುಳಿವು ಬಿಚ್ಚಿಟ್ಟಿದ್ದಾರೆ.
ಕಾಂಗ್ರೆಸ್‍ನವರು ಮಾಡಿದ ಅಪಪ್ರಚಾರದಿಂದ ಸಿಎಂ ಕೇವಲ 37 ಸೀಟು ಗೆದ್ದರು. ಆದರೂ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು, ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಜುಲೈ 30ರೊಳಗೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಯಾವನೊ ಒಬ್ಬ 10 ಲಕ್ಷ ರೂ. 20 ಲಕ್ಷ ರೂ. ಸಾಲ ತಗೊಂಡರೆ ಪಾಪ ಸಿಎಂ ಇದನ್ನು ತೀರಿಸುವುಕ್ಕೆ ಆಗುತ್ತಾ? ವರ್ಷಕ್ಕೆ 6 ಸಾವಿರ ರೂ. ಕೊಟ್ಟು ಇಡೀ ಹಿಂದೂಸ್ತಾನದಲ್ಲಿ ದೊಡ್ಡ ಪ್ರಚಾರ ಮಾಡುತ್ತೀರಿ. ಸುಮ್ಮನೆ ಮಾತನಾಡಲು ನಮಗೂ ಬರುತ್ತದೆ. ಜನರಿಗೆ ನಾವು ಸದಾ ಕಾಲ ಮೋಸ ಮಾಡುವುಕ್ಕೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದರು.