ಬೆಂಗಳೂರು: ಪತ್ನಿಗೆ ವೀಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಲು ಯತ್ನಿಸಿದ ಜಿಮ್ ಟ್ರೈನರ್ (Gym Trainer) ಸಾವಿಗೀಡಾದ ಘಟನೆ ನಗರದ ಬಾಗಲಗುಂಟೆಯಲ್ಲಿ (Bagalakunte) ನಡೆದಿದೆ.
ಮೃತನನ್ನು ಬಿಹಾರ (Bihar) ಮೂಲದ ಅಮಿತ್ ಕುಮಾರ್ (28) ಎಂದು ಗುರುತಿಸಲಾಗಿದೆ. ಸುಮಾರು ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದ ಅಮಿತ್, ಹಾಸನ ಮೂಲದ ಯುವತಿಯನ್ನ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಹಾಗೂ ಅಮಿತ್ ನಡುವೆ ಗಲಾಟೆ ನಡೆದು, ಆಕೆ ತವರು ಮನೆ ಸೇರಿದ್ದಳು. ಇದರಿಂದ ಬೇಸತ್ತ ಅಮಿತ್ ಆಕೆಗೆ ವೀಡಿಯೋ ಕಾಲ್ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಲು ಮುಂದಾಗಿದ್ದಾನೆ. ಈ ವೇಳೆ ಮೊಬೈಲ್ ಕೆಳಗೆ ಬಿದ್ದಿದ್ದು, ನೇಣು ಬಿಗಿದುಕೊಂಡಿದೆ. ಇದರಿಂದ ಆತ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮನೆಯ ಬಾತ್ ರೂಂನಲ್ಲಿ ಯುವತಿ ಅನುಮಾನಾಸ್ಪದ ಸಾವು
ಕಳೆದ ಮೂರು ವರ್ಷಗಳ ಹಿಂದೆ ಅಮಿತ್ ಯುವತಿಯನ್ನು ಮದುವೆಯಾಗಿದ್ದ. ಮೂರು ತಿಂಗಳ ಹಿಂದೆ ಅಮಿತ್ ಪತ್ನಿ ನಸಿರ್ಂಗ್ ಕೆಲಸಕ್ಕೆ ಸೇರಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಈ ಹಿಂದೆ ಜಗಳ ನಡೆದಿತ್ತು. ಇದಾದ ಬಳಿ ಆಕೆ ತವರು ಮನೆ ಸೇರಿದ್ದಳು. ಕಳೆದ ವಾರ ಆಕೆಯನ್ನು ಕರೆದುಕೊಂಡು ಬಂದಿದ್ದ ಅಮಿತ್ ಮತ್ತೆ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದ. ಇದರಿಂದ ಮನನೊಂದ ಮಹಿಳೆ ಮರಳಿ ತವರು ಮನೆಗೆ ಹೋಗಿದ್ದಳು.
ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್