Bengaluru City

ಬೆಂಗ್ಳೂರಿನಲ್ಲಿ ಇಂದಿನಿಂದ ಮಹಿಳೆಯರ ಸುರಕ್ಷತೆಗಾಗಿ `ಪಿಂಕ್ ಹೊಯ್ಸಳ’

Published

on

Share this

ಬೆಂಗಳೂರು: ನಗರದಲ್ಲಿ ಇಂದಿನಿಂದ ಹೊಸ ಗಸ್ತು ವಾಹನಗಳು ರಸ್ತೆಗಿಳಿದಿವೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ 51 ಪಿಂಕ್ ಹೊಯ್ಸಳ ವಾಹನಗಳು ಸೇವೆಗೆ ಲಭ್ಯವಾಗಿವೆ.

ಮಹಿಳೆಯರ ರಕ್ಷಣೆಗೆಂದೇ ಇರುವ ಪಿಂಕ್ ಹೊಯ್ಸಳ ವಾಹನವನ್ನು ಆ್ಯಪ್ ಮೂಲಕ ಮಹಿಳೆಯರು ತಮ್ಮ ಬಳಿ ಬರಮಾಡಿಕೊಳ್ಳಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಈ `ಸುರಕ್ಷ ಆ್ಯಪ್’ ಲೋಕಾರ್ಪಣೆ ಮಾಡಿದ್ದಾರೆ.

ಬಳಿಕ ಮಾತನಾಡಿದ ಸಿಎಂ, ಬೆಂಗಳೂರಿನಲ್ಲಿ ಒಟ್ಟು 272 ಹೊಯ್ಸಳ ವಾಹನಗಳು ಕಾರ್ಯಾಚರಣೆ ಮಾಡಲಿವೆ. ವಾಹನಗಳನ್ನು ಕೊಟ್ಟ ತಕ್ಷಣ ಉದ್ದೇಶ ಸಫಲವಾಗದು. ಆದ್ರೆ ಅಪರಾಧಗಳನ್ನು ತಡೆದಾಗ ಸಫಲವಾಗುತ್ತದೆ ಅಂತಾ ಹೇಳಿದ್ರು.

ವಿಧಾನಸೌಧದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವ ರೋಷನ್ ಬೇಗ್, ಮಾಜಿ ಸಚಿವ ದಿನೇಶ್ ಗುಂಡುರಾವ್, ಸಿಎಸ್ ಸುಭಾಷ್ ಚಂದ್ರ ಕುಂಟಿ, ಡಿಜಿ ಐಜಿ ಆರ್‍ಕೆ ದತ್ತಾ ಭಾಗಿಯಾಗಿದ್ದರು.

ಸೇವೆ ಹೇಗೆ?: ಮಹಿಳೆಯರ ರಕ್ಷಣೆಗೆಂದೇ ಇರುವ ಪಿಂಕ್ ಹೊಯ್ಸಳ ವಾಹನದ ಸೇವೆ ಪಡೆಯಲು ಮೊದಲು `ಸುರಕ್ಷ’ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಈ ವಾಹನದ ಅಗತ್ಯ ಬಿದ್ದಲ್ಲಿ ಆ್ಯಪ್‍ನಲ್ಲಿರೋ ಬಟನ್ ಒತ್ತಬೇಕು. ಈ ರೀತಿ ಮಾಡಿದ 15 ನಿಮಿಷದಲ್ಲಿ ಪಿಂಕ್ ಹೊಯ್ಸಳ ಸ್ಥಳಕ್ಕೆ ಬರಲಿದೆ. ಪ್ರತಿ ವಾಹನದಲ್ಲಿ ಮೂರು ಮಹಿಳಾ ಪೊಲೀಸರು ಇರುತ್ತಾರೆ. ಶಾಲೆ, ಮಹಿಳಾ ಕಾಲೇಜುಗಳು, ಆಫೀಸ್‍ಗಳು, ದೇವಸ್ಥಾನ, ಶಾಪಿಂಗ್ ಮಾಲ್, ಚಿತ್ರಮಂದಿರಗಳ ಬಳಿ ಈ ವಾಹನಗಳನ್ನ ನಿಯೋಜಿಸಲಾಗಿರುತ್ತದೆ. ವಿಶೇಷ ತರಬೇತಿ ಪಡೆದ ಸಿಬ್ಬಂದಿ, ಪೊಲೀಸ್ ಕಂಟ್ರೋಲ್ ರೂಮ್ 100 ಹಾಗೂ ಸುರಕ್ಷ ಆ್ಯಪ್ ಮೂಲಕ ಸ್ವೀಕರಿಸಿದ ದೂರಿನ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿದ್ದಾರೆ. ಪೊಲೀಸ್ ಕಂಟ್ರೋಲ್ ರೂಮಿಗೆ ಯಾವುದಾದ್ರೂ ದೂರು ಬಂದ್ರೆ ಆ ಸ್ಥಳಕ್ಕೆ ಹತ್ತಿರವಿರುವ ಹೊಯ್ಸಳ ವಾಹನಕ್ಕೆ ಮಾಹಿತಿ ನೀಡಿ ಅಲ್ಲಿಗೆ ಹೋಗುವಂತೆ ಸೂಚಿಸಲಾಗುತ್ತದೆ. ಹೊಯ್ಸಳದಲ್ಲಿ ಜಿಪಿಎಸ್ ಹಾಗೂ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಕ್ಯಾಮೆರಾ ದೃಶ್ಯಾವಳಿಗಳನ್ನ ಪೊಲೀಸ್ ಕಂಟ್ರೋಲ್ ರೂಮಿನ ಸಿಬ್ಬಂದಿ ನಿರ್ವಹಣೆ ಮಾಡ್ತಾರೆ.

ಈ ಹಿಂದೆ ಮಹಿಳೆಯರಿಗೆ ಸಂಬಂಧಿಸಿದ ತಂದರೆಗಳಿಗೆ ಸ್ಪಂದಿಸಲು ನಗರದ ಪೊಲೀಸರ ಬಳಿ 7 ಅಭಯ ವಾಹನಗಳು ಇದ್ದವು. ಇದೀಗ ಅಭಯ ವಾಹನಗಳ ಬದಲಾಗಿ ಪಿಂಕ್ ಹೊಯ್ಸಳ ವಾಹನಗಳು ಕಾರ್ಯ ನಿರ್ವಹಿಸಲಿವೆ.

Click to comment

Leave a Reply

Your email address will not be published. Required fields are marked *

Advertisement
Advertisement