ಬೆಂಗಳೂರು: ಕಣ್ಣೀರು ಹಾಕಲು ನಾನು ಪ್ರಯತ್ನ ಪಡುತ್ತಿದ್ದೇನೆ. ಆದ್ರೆ ನನಗೆ ಕಣ್ಣೀರು ಬರುತ್ತಾನೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ವ್ಯಂಗ್ಯವಾಡಿದ್ದಾರೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೂ ಕೂಡ ಕಣ್ಣೀರು ಹಾಕಬೇಕು ಅಂದರೂ ಕಣ್ಣೀರು ಬರುವುದೇ ಇಲ್ಲ. ಆದರೆ ಕೆಲವರಿಗೆ ಸಲೀಸಾಗಿ ಕಣ್ಣೀರು ಬರುತ್ತದೆ. ಹಾಗಾಗಿ ಅವರು ಸಿಕ್ಕಾಗ ಒಮ್ಮೆ ಅವರನ್ನೇ ಕೇಳಿ ಕಣ್ಣೀರಿನ ರಹಸ್ಯ ಏನು ಎಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ನಕ್ಕರು.
Advertisement
ಪಾಪ ಅವರ ಹೃದಯ ಮಿಡಿಯುತ್ತಿದೆ. ಹಾಗಾಗಿ ಒಬ್ಬ ತಂದೆಗೆ ಮಾತ್ರ ತಂದೆಯ ತವಕ ಗೊತ್ತಾಗುತ್ತದೆ ಬಿಡಿ ಎಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ರು.
Advertisement
Advertisement
ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಮಂಜುಗೆ ರಕ್ಷಣೆ ಕೊಡಬೇಕು. ಎಚ್‍ಡಿಕೆಯವರದ್ದು ಹತಾಶೆಯ ಮನೋಭಾವನೆಯಾಗಿದೆ. ಕುಮಾರಸ್ವಾಮಿ ದೃಷ್ಟಿಯಲ್ಲಿ ಅವರಿಗೆ ಮೂರು ಚುನಾವಣೆಗಳು ಬಹಳ ಪ್ರಮುಖವಾಗಿದೆ. ಈ ಕಾರಣದಿಂದಲೇ ಅವರ ಸಂಸಾರವೇ ಚುನಾವಣೆಗೆ ನಿಂತಿದೆ. ಹಾಗಾಗಿ ಸಾಕಷ್ಟು ಹೇಳಿಕೆಯನ್ನು ಕೊಡುತ್ತಿರೋದು ಹತಾಶೆಯ ದ್ಯೋತಕ. ದೇವೇಗೌಡರು ನರೇಂದ್ರ ಮೋದಿಯವರನ್ನು ಪ್ರಧಾನಿ ಆಗೋದಕ್ಕೆ ಬಿಡಲ್ಲ ಅನ್ನೋದು ಹುಡುಗಾಟಿಕೆ ಮಾತಾಗಿದೆ. ಅವರು ಅಡ್ಡ ನಿಲ್ತಾರೆ ಬಿಡಿ ಎಂದು ವ್ಯಂಗ್ಯವಾಡಿದ ಅವರು, ಇಂದೇ ಭವಿಷ್ಯ ನುಡಿಯುತ್ತಿದ್ದೇನೆ. ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ನಿಶ್ಚಿತವಾಗಿದೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
Advertisement
ಇದೇ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಐಟಿ-ಇಡಿ ಸುಖಾಸುಮ್ಮನೆ ದಾಳಿ ನಡೆಸುವುದಿಲ್ಲ. ಅವರೂ ಸಹ ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ದಾಳಿ ನಡೆಸುತ್ತಿದ್ದಾರೆ. ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಸಿಗುತ್ತಿಲ್ವಾ ಎಂದು ಪ್ರಶ್ನಿಸಿದ ಎಸ್‍ಎಂಕೆ, ಇಡಿ ಐಟಿಗೆ ಅವರ ಕೆಲಸ ಮಾಡಲು ಬಿಡಿ ಎಂದರು.