ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಕಲೆ, ಸಂಸ್ಕೃತಿ, ಸಾಹಿತ್ಯ ಪ್ರೀತಿಯನ್ನು ಅನಾವರಣಗೊಳಿಸುವ ಬೆಂಗಳೂರು ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಮುಂದಿನ 15 ದಿನಗಳ ಕಾಲ ಬೆಂಗಳೂರಿನಲ್ಲಿ ಸಾಂಸ್ಕೃತಿಕ ಲೋಕ ಧರೆಗಳಿಯಲಿದೆ. ನಗರದ 40ಕ್ಕೂ ಹೆಚ್ಚು ಕಡೆ ಬೆಂಗಳೂರು ಹಬ್ಬ (Bengaluru Festival) ಅನಾವರಣಗೊಳ್ಳಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಶನಿವಾರ (ನ.30) ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ನಮ್ಮ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ನಮ್ಮ ಜಾತ್ರೆ ಕಾರ್ಯಕ್ರಮ ಬೆಂಗಳೂರು ಹಬ್ಬಕ್ಕೆ ನಾಂದಿಯಾಗಿದ್ದು, ಡಿ.15ರ ವರೆಗೆ ಬೆಂಗಳೂರು ಹಬ್ಬವನ್ನು ಆಚರಿಸಲಾಗುತ್ತಿದೆ.
ಕನ್ನಡ ನಾಡಿನ ಶ್ರೀಮಂತ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಅನ್ ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್, ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬೆಂಗಳೂರು ಹಬ್ಬ 2ನೇ ಆವೃತ್ತಿಯನ್ನು ಅದ್ಧೂರಿಯಿಂದ ಆಚರಿಸುತ್ತಿದೆ. ಇದನ್ನೂ ಓದಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕೆ ಅದ್ದೂರಿ ತೆರೆ – ಲಕ್ಷಾಂತರ ಭಕ್ತರು ಸಾಕ್ಷಿ
ಬೆಂಗಳೂರು ಹಬ್ಬದಲ್ಲಿ ನಗರದ 40 ಕಡೆ ನಮ್ಮ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರನ್ನು ಮನಸೂರೆಗೊಳಿಸುವ 500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆರ್ಗನೈಸ್ ಮಾಡಲಾಗಿದೆ. ಪ್ರಮುಖವಾಗಿ ನಗರದ ಫ್ರೀಡಂ ಪಾರ್ಕ್, ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ (ಬಿಐಸಿ), ಮಲ್ಲೇಶ್ವರದ ಪಂಚವಟಿ, ಕಾಮರಾಜ್ ರಸ್ತೆಯ ಸಭಾ ಮತ್ತು ಎನ್‌ಜಿಎಂಎನಂತಹ ಜನಪ್ರಿಯ ಸ್ಥಳಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ. ನಮ್ಮ ಜಾತ್ರೆಯಲ್ಲಿ ಭಾಗವಹಿಸಿದ ಕಲಾವಿದರು ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ
ನಗರದ ವಿವಿಧ ಸ್ಥಳಗಳಲ್ಲಿ ಪ್ರತಿದಿನ 10ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿದೆ. ಗೋಡೆ ಚಿತ್ರ, ಕಲಾ ಪ್ರದರ್ಶನ, ಬೆಂಗಳೂರು ಸಮಸ್ಯೆ ಬಗೆಹರಿಸುವ ಬೆಂಗಳೂರು ಚಾಲೆಂಜ್, 38 ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಬೃಹತ್ ಜಾನಪದ ಸಂಗೀತ ಕಾರ್ಯಕ್ರಮ, ಬೊಂಬೆಯಾಟ, ನಾಟಕ ಪ್ರದರ್ಶನ ಹೀಗೆ ಅನೇಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನದ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು https://blrhubba.in ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.
ಬೆಂಗಳೂರು ಹಬ್ಬದ ಮತ್ತೊಂದು ವಿಶೇಷ ಅಂದ್ರೆ ಕವಿ ಕುವೆಂಪು ಅವರ 120ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಗಲಗಲ ಗದ್ದಲ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ವೇಳೆ ಪ್ರಸಿದ್ಧ ಸಾಹಿತಿಗಳು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ನಮ್ಮ ಮಠ-ಮಾನ್ಯಗಳ ಜೀರ್ಣೋದ್ಧಾರಕ್ಕೆ ಆ ಮುಲ್ಲಾಗಳಿಂದ ಹಣ ತೆಗೆದುಕೊಳ್ಳಬೇಡಿ: ಯತ್ನಾಳ್